ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆನ್‍ಲೈನ್ ತರಗತಿಗಳು….
ಪುತ್ತೂರು: ಲಾಕ್‍ಡೌನ್‍ನ ಪರಿಣಾಮವಾಗಿ ದೇಶದೆಲ್ಲೆಡೆ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪಾಠದ ವಿಷಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದಕ್ಕಾಗಿ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆನ್‍ಲೈನ್ ತರಗತಿಗಳನ್ನು ನಡೆಸುತ್ತಿದೆ.
ಲಭ್ಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಾಲೇಜಿನ ಇಂಜಿನಿಯರಿಂಗ್ ಮತ್ತು ಎಂಬಿಎ ವಿಭಾಗದ ವಿದ್ಯಾರ್ಥಿಗಳಿಗೆ ದೈನಂದಿನ ನಿಗದಿತ ಪಠ್ಯಕ್ರಮದಂತೆ ಬೆಳಗ್ಗಿನಿಂದ ಸಂಜೆಯವರೆಗೆ ಆನ್‍ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ವಿಭಾಗ ಮುಖ್ಯಸ್ಥರ ನಿರ್ದೇಶನದಂತೆ ಎಲ್ಲಾ ಉಪನ್ಯಾಸಕರು ಆನ್‍ಲೈನ್ ತರಗತಿ, ಪ್ರಶ್ನಾಕೋಶಗಳ ರವಾನೆ, ಅಸೈನ್‍ಮೆಂಟ್, ಕ್ವಿಝ್ ಮತ್ತು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ನೋಟ್ಸ್, ಕಲಿಕಾ ಸಾಮಗ್ರಿಗಳ ರವಾನೆಯ ಜತೆಯಲ್ಲಿ ವಿದ್ಯಾರ್ಥಿಗಳ ಪ್ರಾಜೆಕ್ಟ್ ವರ್ಕ್ ಬಗ್ಗೆ ಸೂಕ್ತ ಸಂವಾದವನ್ನು ನಡೆಸಲಾಗುತ್ತದೆ.
ಕಾರಣಾಂತರದಿಂದ ಆನ್‍ಲೈನ್ ತರಗತಿಗೆ ಹಾಜರಾಗದ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ವಿಡೀಯೋಗಳನ್ನು ಮಾಡಿ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗುತ್ತಿದೆ. ಇದರಿಂದ ತರಗತಿಗಳ ಮರುವೀಕ್ಷಣೆಯೂ ಸಾಧ್ಯವಾಗುತ್ತದೆ. ಕಾಲೇಜಿನ ವೆಬ್‍ಸೈಟ್‍ನಲ್ಲಿಯೂ ಈ ವಿಡಿಯೋಗಳನ್ನು ಅಳವಡಿಸಲಾಗಿದೆ.
ಲಭ್ಯ ತಂತ್ರಜ್ಞಾನಗಳಾದ ಮೂಡಲ್, ಗೂಗಲ್ ಕ್ಲಾಸ್‍ರೂಂ, ಮೀಟ್ ಆಪ್, ಸ್ಕೈಪ್, ಝೂಮ್ ಆಪ್ ಮತ್ತು ವಾಟ್ಸಾಪ್ ಮುಂತಾದವನ್ನು ಇಲ್ಲಿ ಬಳಸಿಕೊಳ್ಳಲಾಗುತ್ತಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು, ನವದೆಹಲಿಯ ಮಾರ್ಗದರ್ಶನದಂತೆ ಬೋಧಕರು ಮತ್ತು ವಿದ್ಯಾರ್ಥಿಗಳು ಪ್ರತಿ ದಿನ ವರ್ಕ್ ಫ್ರಂ ಹೋಂನಲ್ಲಿ ನಿರತರಾಗಿದ್ದಾರೆ ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ತಿಳಿಸಿದ್ದಾರೆ.