ಒಡಿಯೂರಿನಲ್ಲಿ 25ನೇ ತುಳು ಸಾಹಿತ್ಯ ಸಮ್ಮೇಳನ…
ನೆಲಮೂಲ ಸಂಸ್ಕೃತಿಗೆ ಒತ್ತು ನೀಡಿ: ಸಮ್ಮೇಳನಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಕರೆ...
![whatsapp image 2025 02 10 at 11.51.28 am](wp-content/uploads/2025/02/whatsapp-image-2025-02-10-at-11.51.28-am-780x470.jpeg)
ಒಡಿಯೂರು : ‘ತುಳುನಾಡಿನಲ್ಲಿ ಧಾರ್ಮಿಕ, ಸಾಹಿತ್ಯಿಕ ಚಟುವಟಿಕೆಗಳ ಮೂಲಕ ಭಾಷೆಯ ಜಾಗೃತಿ ಮೂಡಿಸಲಾಗುತ್ತದೆ. ನಾಲ್ಕು ಕಾಲ ಬದುಕುವ, ಉಳಿಯುವಂತಹ ಸಾಹಿತ್ಯ ರಚನೆಯಾಗಬೇಕು. ನೆಲಮೂಲದ ಗ್ರಾಮ ಸಂಸ್ಕೃತಿಯತ್ತ ಬರಹಗಾರರು ಗಮನಿಸಬೇಕು. ತುಳುವರನ್ನು ಓದಿನೆಡೆಗೆ ಆಕರ್ಷಿಸುವಂತಹ ರಚನಾತ್ಮಕ ಕೆಲಸಗಳು ಸಾಹಿತ್ಯದಲ್ಲಿ ನಡೆಯಬೇಕು’ ಎಂದು ತುಳು – ಕನ್ನಡ ಸಾಹಿತಿ, ಕರ್ನಾಟಕ ಜಾನಪದ – ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕರೆ ನೀಡಿದ್ದಾರೆ.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಒಡಿಯೂರು ರಥೋತ್ಸವ ಹಾಗೂ ತುಳುನಾಡು ಜಾತ್ರೆಯ ಸಂದರ್ಭದಲ್ಲಿ ‘25ನೇ ತುಳು ಸಾಹಿತ್ಯ ಸಮ್ಮೇಳನ’ ದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಬಂಗಾರದ ಬಟ್ಟಲಾಗಿದ್ದ ತುಳುನಾಡು ಈಗ ಬರಡು ನೆಲವಾಗುತ್ತಿದೆ. ಯುವಕರು ಕೃಷಿ ತ್ಯಜಿಸಿ ಪೇಟೆ ಕಡೆಗೆ ಅಥವಾ ವಿದೇಶಕ್ಕೆ ತೆರಳುತ್ತಿರುವುದು ಬೇಸರದ ವಿಚಾರ. ಇಂದು ತುಳು ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಆಗುತ್ತಿದ್ದು ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ತುಳು ಭಾಷೆಗೆ ಮಾನ್ಯತೆ ಸಿಗುತ್ತಿಲ್ಲ’ ಎಂದವರು ವಿಷಾದಿಸಿದರು.
ವಿಶ್ವಾಸಕ್ಕೆ ಇನ್ನೊಂದು ಹೆಸರು ತುಳುವರು – ಒಡಿಯೂರು ಶ್ರೀಗಳು:
ಕಾರ್ಯಕ್ರಮವನ್ನು ಉದ್ಘಾಟಿಸಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ ‘ತುಳು ಭಾಷೆ ಮತ್ತು ತುಳು ಸಂಸ್ಕೃತಿ ವಿಶ್ವ ಮಾನ್ಯವಾಗಿದೆ. ತುಳುವರಿಗೆ ಎಲ್ಲೆಡೆಯೂ ಗೌರವವಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು. ತುಳುವರು ತುಳು ಭಾಷೆಯನ್ನು ಮರೆಯಬಾರದು. ಪ್ರೀತಿ ವಿಶ್ವಾಸಕ್ಕೆ ಇನ್ನೊಂದು ಹೆಸರೇ ತುಳುವರು. ಇಂದು ತುಳುವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಹಂಚಿಹೋಗಿದ್ದು, ತುಳು ಭಾಷೆಯ ಮಾನ್ಯತೆಗೆ ಒಗ್ಗಟ್ಟಿನ ಹೋರಾಟ ನಡೆಸಬೇಕು’ ಎಂದರು.
ಇದೇ ಸಂದರ್ಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ತುಳುಲಿಪಿಯಲ್ಲಿ ಬರೆದ ‘ಶ್ರೀಮದ್ಭಗವದ್ಗೀತೊ’ ಮತ್ತು ಡಾ. ವಸಂತಕುಮಾರ ಪೆರ್ಲ ಅವರ ‘ಮಾಯಿಪ್ಪಾಡಿ ವೀರ ಪುಳ್ಕೂರ ಬಾಚೆ’ ತುಳು ಕೃತಿಯನ್ನು ಲೋಕಾರ್ಪಣೆ ಗೊಳಿಸಲಾಯಿತು. ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಎ.ಸಿ. ಭಂಡಾರಿ ಮತ್ತು ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅತಿಥಿಗಳಾಗಿದ್ದರು. ತುಳು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.
ತುಲಿಪು ಕಾರ್ಯಕ್ರಮ:
‘ತುಳು ಬಾಸೆ – ಸಂಸ್ಕೃತಿದ ಜಾಗೃತಿಗಾದ್’ ಎಂಬ ಧ್ಯೇಯ ವಾಕ್ಯದೊಂದಿಗೆ ಜರಗಿದ ಸಮ್ಮೇಳದ ವಿಚಾರಗೋಷ್ಠಿ, ತುಲಿಪು ಕಾರ್ಯಕ್ರಮದಲ್ಲಿ ಡಾ.ಎಸ್.ಆರ್.ಅರುಣ್ ಕುಮಾರ್ (ತುಳುನಾಡ್ದ ಸಂತ ಪರಂಪರೆ), ಡಾ.ನವೀನ್ ಕುಮಾರ್ ಮರಿಕೆ (ತುಳುನಾಡ್ದ ಜಾನಪದ ಪರಂಪರೆ), ಮಲ್ಲಿಕಾ ಜೆ.ರೈ ಗುಂಡ್ಯಡ್ಕ (ತುಳುನಾಡ್ದ ಸಾಹಿತ್ಯ ಪರಂಪರೆ) ಪ್ರಬಂಧಗಳನ್ನು ಮಂಡಿಸಿದರು.
‘ತುಳುಸಿರಿ’ ಸಮ್ಮಾನ:
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಪಾಡ್ದನ ಕಲಾವಿದೆ ಕರ್ಗಿ ಶೆಡ್ತಿ, ತುಳು-ಕನ್ನಡ ಸಿನಿಮಾ ನಿರ್ಮಾಪಕ ಪುಷ್ಪರಾಜ ರೈ ಮಲಾರುಬೀಡು, ಸಮಾಜ ಸೇವಕ ಹರೀಶ ಶೆಟ್ಟಿ ಮಾಡ, ಸಾವಯವ ಕೃಷಿಕ ಕೃಷ್ಣಪ್ಪ ಪುರುಷ ಕೇಪು ಮತ್ತು ಆರಕ್ಷಕ ಸೇವೆಗಾಗಿ ಪ್ರವೀಣ್ ರೈ ನಡುಕೂಟೇಲು ಅವರಿಗೆ ‘ತುಳುಸಿರಿ ಮಾನಾದಿಗೆ’ ನೀಡಿ ಸನ್ಮಾನಿಸಲಾಯಿತು. ಬಳಿಕ ಸಮ್ಮೇಳನಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನು ಫಲ – ಮಂತ್ರಾಕ್ಷತೆ, ಸ್ಮರಣಿಕೆ ನೀಡಿ, ಶಾಲು – ಪೇಟ ತೊಡಿಸಿ ಸ್ವಾಮೀಜಿ ಸನ್ಮಾನಿಸಿದರು.
ನಿತ್ಯಶ್ರೀ ರೈ ಪ್ರಾರ್ಥಿಸಿದರು. ತುಳು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಡಾ.ವಸಂತ ಕುಮಾರ್ ಪೆರ್ಲ ಸ್ವಾಗತಿಸಿ, ಪ್ರಸ್ತಾವನೆಗೈದರು. ರಥೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ತುಳುಸಿರಿ ಪುರಸ್ಕೃತರನ್ನು ಪರಿಚಯಿಸಿದರು.
ದೇವಿಪ್ರಸಾದ್ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿ, ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾದೇಶ್ ಭಂಡಾರಿ ವಂದಿಸಿದರು. ಕೊನೆಯಲ್ಲಿ ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ ಜರಗಿತು.