ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ- ಪ್ರಥಮ ವರ್ಷದ ನೂತನ ವಿದ್ಯಾರ್ಥಿಗಳ ಓರಿಯೆಂಟೇಷನ್ ಕಾರ್ಯಕ್ರಮ…

ಮಂಗಳೂರು: ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ 2023 -24 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಸೇರ್ಪಡೆಗೊಂಡ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಓರಿಯೆಂಟೇಷನ್ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಸನ್ಮಾನ್ಯ ಕುಲಾಧಿಪತಿಗಳಾದ ಡಾ. ಸಿಎ ಎ. ರಾಘವೇಂದ್ರ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು ಹಾಗೂ ದೀಪವನ್ನು ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ವೇದಿಕೆಯ ಮೇಲೆ ಆಗಮಿಸಿ ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿದರು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಸನ್ಮಾನ್ಯ ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್, ಶ್ರೀನಿವಾಸ್ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರುಗಳಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್ ಮತ್ತು ಪ್ರೊ. ಶ್ರೀಮತಿ ಮಿತ್ರಾ ಎಸ್. ರಾವ್, ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಪಿ. ಎಸ್. ಐತಾಳ್, ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಡಾ. ಶ್ರೀನಿವಾಸ ಮಯ್ಯ ಡಿ., ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ. ಥಾಮಸ್ ಪಿಂಟೋ, ಅಸೋಸಿಯೇಟ್ ಡೀನ್ ಡಾ. ಪಿ. ಎಸ್. ನೇತ್ರಾವತಿ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಪ್ರೊ. ರೋಹನ್ ಫೆರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಅಸೋಸಿಯೇಟ್ ಡೀನ್ ಡಾ. ಪಿ. ಎಸ್. ನೇತ್ರಾವತಿ ರವರು ಸ್ವಾಗತ ಭಾಷಣವನ್ನು ಮಾಡಿದರು. ಕಾಲೇಜಿನ ಡೀನ್ ಡಾ. ಥಾಮಸ್ ಪಿಂಟೋ ರವರು ಶೈಕ್ಷಣಿಕ, ಪರೀಕ್ಷಾ ವಿಧಾನ, ಮೌಲ್ಯಮಾಪನ, ಉದ್ಯೋಗಾವಕಾಶಗಳು, ಕೌಶಲ್ಯಾಭಿವೃದ್ಧಿ ತರಬೇತಿಗಳು, ಸ್ಟಾರ್ಟ್ ಅಪ್ ಮತ್ತು ಇನ್ಕ್ಯುಬೇಷನ್ ಸೌಲಭ್ಯಗಳು, ವಾಚನಾಲಯ ಸೌಲಭ್ಯ, ವಿದ್ಯಾರ್ಥಿಗಳ ಸಂಘಟನೆ, ಪಠ್ಯೇತರ ಚಟುವಟಿಕೆಗಳು, ಮತ್ತು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ಇನ್ನಿತರ ಹಲವಾರು ಮೌಲ್ಯವರ್ಧಿತ ಸೌಲಭ್ಯಗಳ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು.

ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಪಿ. ಎಸ್. ಐತಾಳ್ ರವರು ಮಾತನಾಡಿ, ಶ್ರೀನಿವಾಸ ವಿಶ್ವವಿದ್ಯಾಲಯವು ಬೆಳೆದು ಬಂದ ಹಾದಿಯ ಕಿರುಚಿತ್ರಣವನ್ನು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನೀಡಿದರು. ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, ಶ್ರೀನಿವಾಸ ವಿಶ್ವವಿದ್ಯಾಲಯದ ಧ್ಯೇಯ, ವಿದ್ಯಾರ್ಥಿಗಳ ಪೋಷಕರ ಹಾಗೂ ಶಿಕ್ಷಕರ ಪಾತ್ರಗಳು ಮತ್ತು ಜವಾಬ್ದಾರಿಗಳು, ಯಶಸ್ವಿ ಇಂಜಿನಿಯರ್ ಆಗಿ ರೂಪುಗೊಳ್ಳುವ ವಿಧಾನ, ಮತ್ತು ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ನೀಡಲಾಗುತ್ತಿರುವ ಪ್ರೋತ್ಸಾಹಗಳ ಕುರಿತು ಮಾಹಿತಿಯನ್ನು ನೀಡಿದರು.

ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿಗಳಾದ ಶ್ರೀನಿವಾಸ್ ವಿಶ್ವವಿದ್ಯಾಲಯದ ಸನ್ಮಾನ್ಯ ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರು ಮಾತನಾಡಿ, ಶ್ರೀನಿವಾಸ್ ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತುತ ಉದ್ಯಮದ ಬೇಡಿಕೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ತಂತ್ರಜ್ಞಾನಗಳನ್ನೊಳಗೊಂಡ ಮೌಲ್ಯವರ್ಧಿತ ಪಠ್ಯಕ್ರಮವನ್ನು ಅಳವಡಿಸಲಾಗಿದೆ, ಇಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನವು ಬಹಳ ಮುಖ್ಯವಾಗಿದೆ, ಭಾರತವು ಚಂದ್ರಯಾನವನ್ನು ಯಶಸ್ವಿಯಾಗಿ ಸಾಧಿಸಿದೆ ಮತ್ತು ಈಗ ಸೂರ್ಯಾಯಾನದ ಹಾದಿಯಲ್ಲಿದೆ ಎಂದು ಹೇಳಿದರು. ಬಾಹ್ಯಾಕಾಶ, ವರ್ಚುವಲ್ ರಿಯಾಲಿಟಿ, ಮುಂತಾದ ಕ್ಷೇತ್ರಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭವಿಷ್ಯದ ಸೂಪರ್ ನಾವೀನ್ಯಕಾರರಾಗಬೇಕು ಎಂದು ಡಾ. ಎ. ಶ್ರೀನಿವಾಸ್ ರಾವ್ ರವರು ಹೇಳಿದರು ಹಾಗೂ ನೂತನವಾಗಿ ಸೇರ್ಪಡೆಗೊಂಡ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.

ಶ್ರೀನಿವಾಸ್ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್ ರವರು ಮಾತನಾಡಿ, ಪ್ರಸ್ತುತ ಜಗತ್ತು ಮೊಬೈಲ್ ಟೆಕ್ನೋಲಜಿ, ರೊಬೊಟಿಕ್ಸ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ತಂತ್ರಜ್ಞಾನವನ್ನು ಅವಲಂಬಿಸಿದೆ. ನೂರು ವರ್ಷ ಹಿಂದಿನ ಸಮಯಕ್ಕೆ ಹೋಲಿಸಿದರೆ ಜಗತ್ತು ಅಜಗಜಾಂತರ ಬದಲಾವಣೆಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನವು ಇನ್ನಷ್ಟು ವೇಗವಾಗಿ ಬದಲಾಗಲಿದೆ. ಆದ್ದರಿಂದ ಇಂದಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬದಲಾಗುತ್ತಿರುವ ತಂತ್ರಜ್ಞಾನವನ್ನು ಕಲಿತುಕೊಂಡು ಜೀವನದಲ್ಲಿ ಯಶಸ್ಸನ್ನು ಹೊಂದಬೇಕು ಎಂದು ಹೇಳಿದರು.

ಶ್ರೀನಿವಾಸ್ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರಾದ ಪ್ರೊ. ಶ್ರೀಮತಿ ಮಿತ್ರಾ ಎಸ್. ರಾವ್ ರವರು ಮಾತನಾಡಿ, ತಂತ್ರಜ್ಞಾನವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ, ಸಮಾಜ ಮತ್ತು ರಾಷ್ಟ್ರದ ಒಳಿತಿಗಾಗಿ ಇಂಜಿನಿಯರಿಂಗ್ ವೃತ್ತಿಪರರು ಮಹತ್ತರವಾದ ಜವಾಬ್ದಾರಿಯನ್ನು ಹೊಂದಿರಬೇಕು ಎಂದು ಹೇಳಿದರು. ಆಧುನಿಕ ಜಗತ್ತಿನ ವೇಗವಾದ ಬೆಳವಣಿಗೆಯಲ್ಲಿ ನಾವು ಮನುಷ್ಯರು ಎನ್ನುವುದನ್ನು ಮರೆಯಬಾರದು, ಭಾರತವು ಅತ್ಯಂತ ವೇಗವಾಗಿ ಅಭಿವೃದ್ಧಿಯನ್ನು ಹೊಂದುತ್ತಿದೆ, ನಾವು ಚಂದ್ರನನ್ನು ತಲುಪಿದ್ದೇವೆ, ಆದ್ದರಿಂದ ಜಗತ್ತಿನ ಇತರ ದೇಶಗಳು ನಮ್ಮ ದೇಶದತ್ತ ವಿಶೇಷ ಗಮನವನ್ನು ನೀಡುತ್ತಿದ್ದಾರೆ. ಈ ಎಲ್ಲಾ ಅಂಶಗಳು ನಮ್ಮ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ, ಆ ಮೂಲಕ ಮುಂದಿನ ದಿನಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿವೆ. ನಿಮ್ಮ ಹೆತ್ತವರು ನಿಮ್ಮ ಉಜ್ವಲ ಭವಿಷ್ಯದ ಕನಸನ್ನು ಹೊಂದಿದ್ದಾರೆ, ನಿಮ್ಮ ನಾಲ್ಕು ವರ್ಷಗಳ ಇಂಜಿನಿಯರಿಂಗ್ ಪದವಿ ಶಿಕ್ಷಣದಲ್ಲಿ ಪೂರ್ಣ ಬದ್ಧತೆಯನ್ನು ತೋರಿಸುವುದು ನಿಮ್ಮ ಕರ್ತವ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಅಧ್ಯಕ್ಷೀಯ ಭಾಷಣವನ್ನು ಮಾಡಿದ ಶ್ರೀನಿವಾಸ್ ವಿಶ್ವವಿದ್ಯಾಲಯದ ಸನ್ಮಾನ್ಯ ಕುಲಾಧಿಪತಿಗಳಾದ ಡಾ. ಸಿಎ ಎ. ರಾಘವೇಂದ್ರ ರಾವ್ ರವರು ಮಾತನಾಡಿ, ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ, ಹಕ್ಕುಸ್ವಾಮ್ಯ, ಕೌಶಲ್ಯ ಅಭಿವೃದ್ಧಿ, ತರಬೇತಿ, ಪೇಟೆಂಟ್ ಮತ್ತು ನಾವೀನ್ಯತೆಗಳಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದ್ದೇವೆ, ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಯಲ್ಲಿ ಹೆಸರಾಂತ ಸಂಸ್ಥೆಗಳ ಅನುಭವಿ ತಂತ್ರಜ್ಞರನ್ನು ಸೇರಿಸಿಕೊಳ್ಳುವುದರ ಮೂಲಕ ಉತ್ತಮ ಗುಣಮಟ್ಟದ ಪಠ್ಯಕ್ರಮವನ್ನು ರಚಿಸಲಾಗಿದೆ, ಆ ಮೂಲಕ ವಿದ್ಯಾರ್ಥಿಗಳ ಕನಸನ್ನು ನನಸಾಗಿಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ ಎಂದು ಹೇಳಿದರು. ಪ್ರತಿಯೋರ್ವ ವಿದ್ಯಾರ್ಥಿಯೂ ನಿರ್ಧಿಷ್ಟ ಗುರಿ ಮತ್ತು ಒಳ್ಳೆಯ ಕನಸನ್ನು ಹೊಂದಿರಬೇಕು, ಮತ್ತು ಅದನ್ನು ಸಾಧಿಸಲು ಪ್ರಯತ್ನಿಸಬೇಕು. ಮಾನವೀಯ ಮೌಲ್ಯಗಳು, ಸಕಾರಾತ್ಮಕ ಮತ್ತು ಧನಾತ್ಮಕ ಚಿಂತನೆಯು ನಿಮ್ಮ ಜೀವನದ ತತ್ವವಾಗಿರಬೇಕು. ಸಮಾಜಕ್ಕೆ ನಿಮ್ಮ ಪಾತ್ರ ಮತ್ತು ಕೊಡುಗೆ ಬಹಳ ಮುಖ್ಯ. ಚೀನಾ ದೇಶವು ಭಾರತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇಂಜಿನಿಯರಿಂಗ್‌ ವೃತ್ತಿಪರರನ್ನು ಹೊಂದಿದೆ. ನಮ್ಮ ಯುವ ಜನತೆಯು ಇತರ ದೇಶಗಳ ಜೊತೆಗೆ ಉತ್ತಮ ಧನಾತ್ಮಕ ಸ್ಪರ್ಧೆಯನ್ನು ನೀಡಬೇಕಿದೆ. ಇಂಜಿನಿಯರಿಂಗ್‌ನ ಪ್ರತಿಯೊಂದು ವಿಭಾಗವೂ ಉತ್ತಮ ಬೇಡಿಕೆಯನ್ನು ಹೊಂದಿದೆ, ಜೀವನದಲ್ಲಿ ಯಶಸ್ವಿಯಾಗಲು ವಿದ್ಯಾರ್ಥಿಗಳು ಸಂಶೋಧನೆ ಮತ್ತು ನಾವೀನ್ಯತೆಗಳ ಮೇಲೆ ಕೇಂದ್ರೀಕರಿಸಬೇಕು, ಆ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ಕೊಡುಗೆಯನ್ನು ನೀಡುವಂತಾಗಬೇಕು ಎಂದು ಡಾ. ಸಿಎ ಎ. ರಾಘವೇಂದ್ರ ರಾವ್ ರವರು ಹೇಳಿದರು ಹಾಗೂ ನೂತನ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.

ಕಾರ್ಯಕ್ರಮದ ಸಂಯೋಜಕರಾದ ಪ್ರೊ. ರೋಹನ್ ಫೆರ್ನಾಂಡಿಸ್ ಧನ್ಯವಾದ ಸಮರ್ಪಣೆ ಮಾಡಿದರು. ವಿದ್ಯಾರ್ಥಿನಿ ಕುಮಾರಿ ಮಾಧುರಿ ಆಚಾರ್ಯ ಮತ್ತು ಕುಮಾರಿ ಅಂತರ್ಯಾ ರಾವ್ ಪ್ರಾರ್ಥನೆಯನ್ನು ಸಲ್ಲಿಸಿದರು. ವಿದ್ಯಾರ್ಥಿನಿ ಕುಮಾರಿ ಶ್ರೀಜಾ ಶೆಟ್ಟಿ, ಕುಮಾರಿ ನೇಹಾ ಪೇಟ್ಕರ್ ಮತ್ತು ಸ್ಯಾಮ್ ಬಂಗೇರಾ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಹೆತ್ತವರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ: ಪ್ರೊ. ಶ್ರೀನಾಥ್ ರಾವ್ ಕೆ.

Sponsors

Related Articles

Back to top button