ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಧ್ವಜಸ್ತಂಭದ ತೈಲಾಧಿವಾಸ ಕಾರ್ಯಕ್ರಮ…
ಬಂಟ್ವಾಳ: ತುಳುನಾಡಿನಲ್ಲಿ ಪರಶುರಾಮ ಸೃಷ್ಟಿಯ ಶಕ್ತಿ ಮಹಿಮೆ, ಮಣ್ಣಿನ ಕಾರ್ಣಿಕ ವಿಶೇಷವಾಗಿದ್ದು, ಆಚರಣೆಗಳು, ನಡಾವಳಿಗಳು ಅದ್ಬುತವಾಗಿದೆ. ನಮಗೆ ಜಾತಿ ಮುಖ್ಯವಲ್ಲ, ಧರ್ಮ ಆಚರಣೆ ಅಗತ್ಯವಾಗಿದ್ದು, ಸಾಮರಸ್ಯದ ಬದುಕು ಬೇಕಾಗಿದೆ. ಶ್ರೀ ಮಹಾಲಿಂಗೇಶ್ವರ ದೇಹದ ಒಳಗಿದ್ದರೆ ಶಿವ, ಶಿವ ದೇವರು ದೇಹದಿಂದ ಹೊರಗೆ ಹೋದರೆ ದೇಹ ಶವವಾಗುತ್ತದೆ ಎಂದು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಹಂತದ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಧ್ವಜಸ್ತಂಭ(ಕೊಡಿಮರ)ದ ತೈಲಾಧಿವಾಸ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ದೇವಾಲಯದ ಪುನರ್ ಪ್ರತಿಷ್ಠಾಪನೆ ಮಾಡುವ ಕಾರ್ಯದಲ್ಲಿ ನಾವೆಲ್ಲರೂ ಜೊತೆಯಾಗಿ ಕೈ ಜೋಡಿಸಬೇಕು. ದೇವಸ್ಥಾನದ ಮುಂಭಾಗದಲ್ಲಿ ಕೊಡಿಮರ ಸಾವಿರಾರು ವರ್ಷ ಉಳಿಯಲಿದ್ದು, ಅಂತಹ ಪುಣ್ಯದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಪ್ರಾರ್ಥನ ಮಂದಿರದಲ್ಲಿ ನಡೆಯುವ ಪ್ರಾರ್ಥನೆ ಜಗತ್ತಿನ ಏಳಿಗೆಗೆ ಸಹಾಯಕವಾಗಲಿದೆ. ಬದುಕಿನುದ್ದಕ್ಕೂ ಪ್ರತಿಯೊಂದು ಜೀವನಕ್ಕೂ ಬೆಲೆ ನೀಡಿ ಗೌರವದಿಂದ ಕಾಣಬೇಕಾಗಿದೆ. ತುಂಬೆಯ ಮಹಾಲಿಂಗೇಶ್ವರನ ಪುಣ್ಯದ ಮಣ್ಣಿನಲ್ಲಿ ನಾವು ಮಾಡಿದ ತೈಲಾಧಿವಾಸ ಕಾರ್ಯಕ್ರಮ ಇತಿಹಾಸದ ಪುಟದಲ್ಲಿ ಉಳಿಯಲಿದೆ. ಪುಣ್ಯ ಸಂಪಾದನೆಗಾಗಿ ದೇವಸ್ಥಾನಕ್ಕೆ ಹೋಗುವುದು, ಇದು ನಮ್ಮ ಬದುಕಿನ ಸತ್ಯವಿಚಾರ. ಇದು ಮುಂದಿನ ಪೀಳಿಗೆಗೆ ತಿಳಿಯಬೇಕಾಗಿದೆ. ಆಚಾರ, ವಿಚಾರಗಳ ಬಗ್ಗೆ ಸತ್ಯದ ಮನದಟ್ಟು ಮಾಡುವ ಕೆಲಸ ಆಗಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಅಜೀರ್ಣ ಅವಸ್ಥೆಯಲ್ಲಿ ಇರುವ ಗ್ರಾಮೀಣ ಭಾಗದ ದೇವಾಲಯವನ್ನು ಜೀರ್ಣೋದ್ಧಾರ ಕಾರ್ಯ ಸಾಹಸದ ಕೆಲಸ. ಅಂತಹ ಸಾಹಸದ ಕೆಲಸಕ್ಕೆ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮುಂದಾಗಿದ್ದಾರೆ. ಭಕ್ತರ ಸಹಕಾರದಿಂದ ದೇವಾಲಯ ಸುಂದರವಾಗಿ ಮೂಡಿಬರಲಿದೆ. ದೇವಸ್ಥಾನದ ಕೆಲಸ ಇನ್ನೂ ಪೂರ್ತಿಯಾಗಿಲ್ಲ, ಇನ್ನಷ್ಠು ಕಾರ್ಯಗಳು ನಡೆಯಬೇಕಾಗಿದೆ. ಹಾಗಾಗಿ ಊರಪರ ಊರ ಭಕ್ತರ ಸಹಾಯಬೇಕಾಗಿದೆ.
ಧರ್ಮದ ಕಾರ್ಯದಲ್ಲಿ ಎಲ್ಲರೂ ಜೊತೆಯಾಗಿ, ನಾವು ದುಡಿದ ಒಂದು ಪಾಲನ್ನು ದೇವಾಲಯದ ನಿರ್ಮಾಣಕ್ಕಾಗಿ ವಿನಿಯೋಗ ಮಾಡುವ ಮನಸ್ಸು ಮಾಡಬೇಕು. ತಾನು ಅರಣ್ಯ ಸಚಿವರಾಗಿದ್ದ ಕಾಲದಲ್ಲಿ ಜಿಲ್ಲೆಯ ಅನೇಕ ಭಾಗದ ದೇವಸ್ಥಾನದ ಕಾರ್ಯದಲ್ಲಿ ರಾಜಕೀಯ ರಹಿತವಾಗಿ ಸೇವೆ ಮಾಡಿದ್ದೇನೆ. ಪ್ರಸ್ತುತ ಕಾಲದಲ್ಲಿ ಪ್ರಚಾರಕ್ಕಿರುವಷ್ಟು ಬೆಲೆ ಕೆಲಸಕ್ಕೆ ಇಲ್ಲ ಎಂಬುದನ್ನು ಅರಿತಿದ್ದೇನೆ. ಸುಳ್ಳು ಅಪಪ್ರಚಾರಗಳಿಗೆ ಇಂದು ಕಾಲವಾಗಿದೆ ಎಂದರು.
ವೇದಿಕೆಯಲ್ಲಿ ಉದ್ಯಮಿ ರಘುನಾಥ ಸೋಮಯಾಜಿ, ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಮಂಗಳೂರಿನ ಬಿಲ್ಡರ್ ಪ್ರಶಾಂತ್ ಸನಿಲ್, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಪಿ.ಶೆಟ್ಟಿ ಬೆಂಜನಪದವು, ಜಿಲ್ಲಾ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯ ಜಗನ್ನಾಥ ಚೌಟ, ಜಿ.ಪಂ.ಮಾಜಿ ಸದಸ್ಯ ರವೀಂದ್ರ ಕಂಬಳಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಸ್ವಾಗತಿಸಿದರು. ಕಿಶೋರ್ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ಉಮೇಶ್ ರೆಂಜೋಡಿ ವಂದಿಸಿದರು.