ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ವಾರ್ಷಿಕ ಕ್ರೀಡಾಕೂಟ…
ಪುತ್ತೂರು: ಗುರಿಯನ್ನು ನಿರ್ಧರಿಸಿ ಕಾರ್ಯಯೋಜನೆಯನ್ನು ತಯಾರಿಸಿದ ಮೇಲೆ ಪ್ರತಿದಿನ ನಿಷ್ಠೆಯಿಂದ ಶ್ರಮವಹಿಸಿ ಅಭ್ಯಾಸ ಮಾಡಿದರೆ ನಮ್ಮ ನಾಳೆಗಳು ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ ಎಂದು ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಾರ್ಷಿಕ ಕ್ರೀಡಾ ಕೂಟದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಮಾನಸಿಕ ಗುರಿಯನ್ನು ಮುಟ್ಟಲು ದೈಹಿಕ ಸಾಮರ್ಥ್ಯ ಮುಖ್ಯವಾಗಿದೆ. ಈ ದೈಹಿಕ ಸಾಮರ್ಥ್ಯವನ್ನು ಗಳಿಸಿಕೊಳ್ಳಲು ನಿತ್ಯ ಮಿತವಾದ ವ್ಯಾಯಾಮ, ಕ್ರೀಡಾ ಚಟುವಟಿಕೆಗಳು ಅಗತ್ಯ ಎಂದು ಹೇಳಿದರು. ಸಮಾಜದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಂತು ಉತ್ತಮ ತಂತ್ರಜ್ಞರಾಗಿ ಎಂದು ಅವರು ಹಾರೈಸಿದರು.
ಗೌರವ ಅತಿಥಿಗಳಾದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಟಿ.ಎಸ್.ಸುಬ್ರಮಣ್ಯ ಭಟ್ ಮಾತನಾಡಿ ನಿರಂತರ ಪ್ರೋತ್ಸಾಹ , ಉತ್ತಮ ತರಬೇತಿ ಹಾಗೂ ಉನ್ನತ ಸಾಧನೆ ಇದ್ದಾಗ ನಾವು ಖಂಡಿತವಾಗಿಯೂ ಮೇಲ್ಮಟ್ಟಕ್ಕೆ ಏರಬಲ್ಲೆವು ಎಂದರು. ಸತತ ಎರಡು ವರ್ಷಗಳಿಂದ ನಮ್ಮ ಕಾಲೇಜಿನ ತಂಡವು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಚಾಂಪಿಯನ್ ಆಗಿರುವುದೇ ಇದಕ್ಕೆ ಉದಾಹರಣೆ. ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ಕಳೆದೆರಡು ವರ್ಷಗಳಲ್ಲಿ ಕಾಲೇಜಿನ ಕ್ರೀಡಾ ಸಾಧನೆಯು ಉನ್ನತ ಮಟ್ಟದಲ್ಲಿದ್ದು ಇದರ ಹಿಂದೆ ಅನೇಕರ ಶ್ರಮ ಅಡಗಿದೆ ಅವರೆಲ್ಲರೂ ಅಭಿನಂದನಾರ್ಹರು ಎಂದರು. ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೊಭಾವವನ್ನು ಎಲ್ಲರೂ ಬೆಳೆಸಿಕೊಂಡರೆ ಸಣ್ಣ ಸಣ್ಣ ವಿಷಯಗಳಿಗೆ ಧೃತಿಗೆಡುವ ಪ್ರಮೇಯವು ಬರಲಾರದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ ಜಯ ಅಪಜಯಗಳು ಸಾಮಾನ್ಯ ಅದನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅದನ್ನು ಸ್ವೀಕರಿಸುವ ಮತ್ತು ಅದರಿಂದ ಪಾಠ ಕಲಿಯುವ ಸಾಧ್ಯತೆ ಮಾತ್ರ ನಮಗಿದೆ. ಉತ್ತಮ ಕ್ರೀಡಾಪಟುವಾಗಬೇಕಾದರೆ ಸಮತೋಲಿತ ಆಹಾರ, ಪರಿಶ್ರಮದ ಅಭ್ಯಾಸ ಅಗತ್ಯ ಇದು ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಏರಿಸಬಲ್ಲದು ಮತ್ತು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಬಲ್ಲದು ಎಂದರು.
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ಭಾರತೀಯ ಸೇನಾಪಡೆಗಳ ವಿಶ್ರಾಂತ ಅತ್ಲೆಟಿಕ್ ತರಬೇತುದಾರ ರವಿಶಂಕರ್ ಮುಕುಂದ, ಪುತ್ತೂರಿನ ಯುವಜನ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿ ಶ್ರೀಕಾಂತ್ ಪೂಜಾರಿ ಬಿರಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆಯನ್ನು ಮಾಡಿದ ಕ್ರೀಡಾಪಟುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಆಕರ್ಷಕ ಪಥ ಸಂಚಲನವನ್ನು ಮಾಡಿದ ತಂಡಗಳನ್ನು ಆರಿಸುವಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ಜ್ಯೋತಿ ಹಾಗೂ ವಿವೇಕಾನಂದ ಸೆಂಟ್ರಲ್ ಸ್ಕೂಲ್‍ನ ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ಕುಮಾರ್ ಅವರು ಸಹಕರಿಸಿದರು. ಪಥ ಸಂಚಲನದಲ್ಲಿ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಥಮ, ಎಂಬಿಎ ವಿದ್ಯಾರ್ಥಿಗಳು ದ್ವಿತೀಯ ಹಾಗೂ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಳು ತೃತೀಯ ಸ್ಥಾನವನ್ನು ಪಡೆದುಕೊಂಡರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಸ್ವಾಗತಿಸಿ, ಪ್ರೊ.ಭಾರತಿ ವಂದಿಸಿದರು. ಪ್ರೊ.ನೀಮಾ ಹಾಗೂ ಪ್ರೊ.ಸೌಜನ್ಯ ಕಾರ್ಯಕ್ರಮ ನಿರ್ವಹಿಸಿದರು.