ಜ.25: ಕರ್ನಿರೆ ಸುವರ್ಣ ಪ್ರತಿಷ್ಠಾನದಿಂದ ಯಕ್ಷ ಕಲಾರಾಧನೆ – ಅಷ್ಟ ದಿಗ್ಗಜರ ಸಮ್ಮಾನ…
ಮಂಗಳೂರು: ಸುವರ್ಣ ಪ್ರತಿಷ್ಠಾನ ಕರ್ನಿರೆ ಇವರು ತಮ್ಮ 11ನೇ ವಾರ್ಷಿಕೋತ್ಸವದ ಅಂಗವಾಗಿ ಶೈಕ್ಷಣಿಕ ನರವಿನೊಂದಿಗೆ ಯಕ್ಷ ಕಲಾರಾಧನೆ ಮತ್ತು ಹಿರಿಯ ಕಲಾವಿದರ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದೇ ಜನವರಿ 25ರಂದು ಶನಿವಾರ (ನಾಳೆ) ಸಂಜೆ 4:30 ರಿಂದ ಕರ್ನಿರೆ ಜಾರಂದಾಯ ದೈವದ ಗಡುವಾಡು ಬಳಿ ಕೊಪ್ಪಳ ತೋಟದಲ್ಲಿ ದುಬೈ ನಿವಾಸಿ – ಹವ್ಯಾಸಿ ಯಕ್ಷಗಾನ ವೇಷಧಾರಿ ಪ್ರಭಾಕರ ಡಿ. ಸುವರ್ಣ ಮತ್ತು ಕುಟುಂಬಿಕರು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ ಎಂದು ಸಂಯೋಜಕರಾದ ಬಿ.ಜನಾರ್ದನ ಅಮ್ಮುಂಜೆ ತಿಳಿಸಿದ್ದಾರೆ.
ಕಲಾವಿದ – ವಿದ್ವಾಂಸರ ಸಮ್ಮಾನ:
ಯಕ್ಷಗಾನ ಕ್ಷೇತ್ರದಲ್ಲಿ ತಾಳಮದ್ದಳೆ ಅರ್ಥಧಾರಿಗಳಾಗಿ, ವೇಷಧಾರಿಗಳಾಗಿ ಮತ್ತು ಸಂಘಟಕರಾಗಿ ಪ್ರಸಿದ್ಧರಾದ ಎಂಟು ಮಂದಿ ದಿಗ್ಗಜರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಯಕ್ಷಗಾನ ವಿದ್ವಾಂಸರಾದ ಡಾ.ಎಂ. ಪ್ರಭಾಕರ ಜೋಶಿ ಮತ್ತು ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಅರ್ಥಧಾರಿ, ಸಂಘಟಕರಾದ ಉಜಿರೆ ಅಶೋಕ ಭಟ್, ಜಬ್ಬಾರ್ ಸಮೋ ಸಂಪಾಜೆ, ವೇಷಧಾರಿಗಳಾದ ಸರಪಾಡಿ ಅಶೋಕ ಶೆಟ್ಟಿ, ಡಿಮನೋಹರ ಕುಮಾರ್, ಶಶಿಕಾಂತ ಶೆಟ್ಟಿ ಕಾರ್ಕಳ ಹಾಗೂ ಯಕ್ಷಗಾನ ಮತ್ತು ನೃತ್ಯ ಕಲಾವಿದೆ ಸುಮಂಗಲಾ ರತ್ನಾಕರ್ ಸನ್ಮಾನ ಸ್ವೀಕರಿಸಲಿದ್ದಾರೆ.
ಸಮಾರಂಭದಲ್ಲಿ ಪ್ರತಿಷ್ಠಾನದ ವತಿಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ ನಿಧಿಯನ್ನು ವಿತರಿಸಲಾಗುವುದು. ಬಳಿಕ ತೆಂಕುತಿಟ್ಟಿನ ವಿವಿಧ ಮೇಳಗಳ ಹೆಸರಾಂತ ಕಲಾವಿದರಿಂದ ‘ಶ್ರೀಮತಿ ಪರಿಣಯ – ಸಮಗ್ರ ಭೀಷ್ಮ’ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸುವರ್ಣ ಪ್ರತಿಷ್ಠಾನ ಕರ್ನಿರೆ ಅಧ್ಯಕ್ಷ ಪ್ರಭಾಕರ ಡಿ.ಸುವರ್ಣ ಪ್ರಕಟಣೆಯಲ್ಲಿ ತಿಳಿಯಪಡಿಸಿದ್ದಾರೆ.