ಶರತ್ ಮಡಿವಾಳ ಬಲಿದಾನ ದಿವಸ್ – ಸಂಸ್ಮರಣೆ…
ಬಂಟ್ವಾಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿದ್ದ ಶರತ್ ಮಡಿವಾಳರ ಏಳನೇ ವರ್ಷದ ಬಲಿದಾನ ದಿವಸ್ ಸಂಸ್ಮರಣೆ ಕಾರ್ಯಕ್ರಮ ಜು. 7 ರಂದು ಸಜಿಪ ಕಂದೂರು ಪಾಡಿ ಮನೆಯ ಸಮೀಪದ ಸ್ಮಾರಕ ಭವನದಲ್ಲಿ ನೆರವೇರಿಸಲಾಯಿತು. ಸಾಮಾಜಿಕ ಕಾರ್ಯ ಕರ್ತರಾಗಿದ್ದ ಶರತ್ ಮಡಿವಾಳರು ಬಿಸಿರೋಡಿನಲ್ಲಿ ಉದಯ ಲಾಂಡ್ರಿ ಅಂಗಡಿಯನ್ನು ಹೊಂದಿದ್ದರು. ಏಳು ವರ್ಷಗಳ ಹಿಂದೆ ಜುಲೈ 6 ರಂದು ರಾತ್ರಿ ಹೊತ್ತಿನಲ್ಲಿ ಮತಾಂಧ ದುಷ್ಕರ್ಮಿಗಳು ಚೂರಿಯಲ್ಲಿ ಇರಿದಿದ್ದರು. ಹಲವು ಆರೋಪಿಗಳನ್ನು ಬಂಧಿಸಲಾಗಿದ್ದರೂ ಪ್ರಮುಖ ಆರೋಪಿಯೋರ್ವ ಇನ್ನೂ ಬಂಧನವಾಗಿಲ್ಲ ಎನ್ನಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿದೆ. ತನಿಖೆಯನ್ನು ಎನ್ಐಎ ಗೆ ಒಪ್ಪಿಸಬೇಕೆಂದು ಸಂಸದರಿಗೆ ಮನವಿ ಸಲ್ಲಿಸಲಾಯಿತು.
ಸಂಸ್ಮರಣೆ ದಿನದ ಕಾರ್ಯಕ್ರಮದಲ್ಲಿ ಮಂಗಳೂರು ಲೋಕಸಭಾ ಸದಸ್ಯ ಬೃಜೇಶ್ ಚೌಟ ಭಾಗವಹಿಸಿ ನಮನ ಸಲ್ಲಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ಸಂಘದ ಉತ್ತಮ ಕಾರ್ಯಕರ್ತರಾಗಿದ್ದು, ಕ್ರಿಯಾಶೀಲರಾಗಿದ್ದರು ಎಂದರು. ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯರು ನುಡಿನಮನ ಸಲ್ಲಿಸಿದರು.
ಶರತ್ ಮಡಿವಾಳರ ತಂದೆ ತನಿಯಪ್ಪ ಮಡಿವಾಳ,ತಾಯಿ ನಳಿನಿ ಭಾವಚಿತ್ರದೆದುರು ದೀಪ ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಕುಂಪಲ, ಬಂಟ್ಟಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಮಾಜಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ದಿನೇಶ್ ಅಮ್ಟೂರು,ಗೋವಿಂದ ಪ್ರಭು, ಪುಷ್ಪರಾಜ ಚೌಟ, ಜಯಶಂಕರ ಬಾಸ್ರಿತ್ತಾಯ, ಕ.ಕೃಷ್ಣಪ್ಪ, ಸುಜಿತ್ ಕೊಟ್ಟಾರಿ, ಸುರೇಶ ಟೈಲರ್ ಹಾಗೂ ಸಂಘ ಪರಿವಾರದ ಪ್ರಮುಖರು, ಕುಟುಂಬಸ್ಥರಿದರು.