ವಿಶ್ವ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ಹಳ್ಳಾಡಿ ಜಯರಾಮ ಶೆಟ್ಟಿ ಆಯ್ಕೆ…

ಮಂಗಳೂರು: ವಿಶ್ವ ಬಂಟ ಪ್ರತಿಷ್ಠಾನವು ಡಾ.ಡಿ.ಕೆ. ಚೌಟ ದತ್ತಿನಿಧಿಯಿಂದ ನೀಡುವ ಯಕ್ಷಗಾನ ಪ್ರಶಸ್ತಿಗೆ 2024ನೇ ಸಾಲಿನಲ್ಲಿ ಬಡಗು ತಿಟ್ಟಿನ ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ.
ಪ್ರೊ.ಜಿ.ಆರ್.ರೈ, ಪಳ್ಳಿ ಕಿಶನ್ ಹೆಗ್ಡೆ ಮತ್ತು ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನೊಳಗೊಂಡ ಆಯ್ಕೆ ಸಮಿತಿಯು ‘ಬಂಟ ಪ್ರತಿಷ್ಠಾನ ಪ್ರಶಸ್ತಿ’ಗೆ ಅವರ ಹೆಸರನ್ನು ಶಿಫಾರಸು ಮಾಡಿದೆ. ಪ್ರಶಸ್ತಿಯು ರೂ.25,000/- ನಗದು ಹಾಗೂ ಫಲಕವನ್ನೊಳಗೊಂಡಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಸಿಎ ವೈ.ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಹಳ್ಳಾಡಿ ಜಯರಾಮ ಶೆಟ್ಟಿ:
ಕುಂದಾಪುರ ತಾಲೂಕಿನ ಹಳ್ಳಾಡಿ ಅಣ್ಣಪ್ಪ ಶೆಟ್ಟಿ – ಅಕ್ಕಮ್ಮ ದಂಪತಿಗೆ 1955ರಲ್ಲಿ ಜನಿಸಿದ ಜಯರಾಮ ಶೆಟ್ಟಿ ಬಡಗು ತಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ಹಿರಿಯ ಹಾಸ್ಯ ಕಲಾವಿದ. ಕಮಲಶಿಲೆ, ಮಂದರ್ತಿ, ಪೆರ್ಡೂರು, ಅಮೃತೇಶ್ವರಿ, ಸಾಲಿಗ್ರಾಮವಲ್ಲದೆ ತೆಂಕಿನ ಕುಂಬಳೆ ಮತ್ತು ಮೂಲ್ಕಿ ಮೇಳಗಳಲ್ಲಿ ಒಟ್ಟು 55 ವರ್ಷಗಳ ತಿರುಗಾಟ ಮಾಡಿದ್ದಾರೆ. ಸಾಲಿಗ್ರಾಮ ಮೇಳವೊಂದರಲ್ಲೇ 25 ವರ್ಷಗಳ ಸೇವೆ ಅವರದು.
ದಾರುಕ, ಬಾಹುಕ, ಚಂದಗೋಪ, ಮಂಥರೆ,ಕಂದರ, ಕೈರವ, ಕೋಳಿಪಡಿ ಕುಷ್ಠ, ಸಂಧ್ಯಾ ಸಾವೇರಿಯ ಸುಂದರ ಅವರಿಗೆ ಹೆಸರು ತಂದ ಪಾತ್ರಗಳು. ಭೀಮ, ವಲಲ, ಮದನ, ಕೃಷ್ಣ, ಯಮ ಮೊದಲಾದ ಸಂಕೀರ್ಣ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಸಾಂಪ್ರದಾಯಿಕ ಹೂವಿನ ಕೋಲು, ಪೀಠಿಕೆ ಸ್ತ್ರೀ ವೇಷ, ಚೆಂಡೆ – ಮದ್ದಳೆ ವಾದನಗಳಲ್ಲೂ ಪರಿಶ್ರಮವಿದೆ.
ಪೇಜಾವರ ಮಠದ ರಾಮ ವಿಠಲ ಪ್ರಶಸ್ತಿ, ಕಲಾದರ್ಶಿನಿಯ ಕಾರಂತ ಪ್ರಶಸ್ತಿ, ಆರಾಟೆ ಪ್ರಶಸ್ತಿ, ಪಡುಬಿದ್ರಿ ಸುಂದರ ಶೆಟ್ಟಿ ಪ್ರಶಸ್ತಿ, ಹಾಸ್ಯರತ್ನ – ಹಾಸ್ಯ ಚಕ್ರವರ್ತಿ – ಯಕ್ಷ ಕಲಾರತ್ನ ಬಿರುದುಗಳು ಅವರಿಗೆ ಸಂದಿವೆ. ಪತ್ನಿ ರೇಣುಕಾ, ಪುತ್ರ ರತೀಶ, ಪುತ್ರಿ ಸೌಮ್ಯ ಸಹಿತ ಮಕ್ಕಳು – ಮೊಮ್ಮಕ್ಕಳೊಂದಿಗೆ ಹಳ್ಳಾಡಿ ಸಮೀಪ ಕಕ್ಕುಂಜೆಯಲ್ಲಿ ವಾಸವಾಗಿರುವ ಹಳ್ಳಾಡಿಯವರು ಸಂತೃಪ್ತ ಸಂಸಾರಿ.

ಪ್ರಶಸ್ತಿ ಪ್ರದಾನ :
ಆ.10ರಂದು ನಗರದ ಮೋತಿ ಮಹಲ್ ಹೋಟೆಲ್‌ನಲ್ಲಿ ನಡೆಯುವ ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್‌ನ 28ನೇ ವಾರ್ಷಿಕ ಮಹಾಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಸಂದರ್ಭದಲ್ಲಿ ಮೇಜರ್ ಜನರಲ್ ಸತೀಶ್ ಭಂಡಾರಿ ಅವರಿಗೆ ‘ಎಮಿನೆಂಟ್ ಬಂಟ್ ಪರ್ಸನಾಲಿಟಿ ಅವಾರ್ಡ್’ ಕೂಡಾ ನೀಡಲಾಗುವುದು.

ಸನ್ಮಾನ:
ಸಮಾರಂಭದಲ್ಲಿ ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ.ಕೆ.ಪ್ರಕಾಶ್ ಶೆಟ್ಟಿ ಅವರನ್ನೂ ಸನ್ಮಾನಿಸಲಾಗುವುದು. ಕೃಷಿ ಕ್ಷೇತ್ರದ ಸಾಧನೆಗಾಗಿ ಪುಷ್ಪ ಶೆಟ್ಟಿ ಅವರಿಗೆ ದಿ.ಎಣ್ಮಕಜೆ ಕಲಾವತಿ ಶೆಟ್ಟಿ ದತ್ತಿನಿಧಿ ಪ್ರಶಸ್ತಿ , ಸಿಎ ಮನೀಶ್ ಶೆಟ್ಟಿ ಅವರಿಗೆ ಸಿಎ ವೈ.ಆರ್.ಶೆಟ್ಟಿ ದತ್ತಿನಿಧಿ ಪ್ರಶಸ್ತಿ , ಸಿಎ ರೋಶನ್ ಶೆಟ್ಟಿ ಅವರಿಗೆ ಸಿಎ ಗೋಪಾಲ್.ಬಿ.ಶೆಟ್ಟಿ ದತ್ತಿನಿಧಿ ಪ್ರಶಸ್ತಿ ವಿತರಿಸಲಾಗುವುದೆಂದು ವಿಶ್ವ ಬಂಟ ಪ್ರತಿಷ್ಠಾನದ ಕಾರ್ಯದರ್ಶಿ ಸಿಎ ಸುಧೀರ್ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

whatsapp image 2024 08 06 at 3.29.57 pm

Sponsors

Related Articles

Back to top button