ಡಿ.14 : ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ “ಸಾವರ್ಕರ್ ಸಭಾಂಗಣ” ಉದ್ಘಾಟನೆ…
ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಗೆ ಹೊಸ ಸಭಾಂಗಣದ ಆವಶ್ಯಕತೆಯನ್ನು ಮನಗಂಡಂತಹ ಮಾತೃ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘವು ಸುಮಾರು 3 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹವಾನಿಯಂತ್ರಿತ ಸಾವರ್ಕರ್ ಸಭಾಂಗಣವನ್ನು ನಿರ್ಮಿಸಿಕೊಟ್ಟಿದೆ. ಇದರ ಉದ್ಘಾಟನೆಯು ಡಿ. 14 ಶನಿವಾರ ಮಧ್ಯಾಹ್ನ 12 ಗಂಟೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಆಡಳಿತ ಮಂಡಳಿ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡಿ. 14 ಶನಿವಾರ ಮಧ್ಯಾಹ್ನ 12 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಪುತ್ತೂರಿನ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ರೀ.ಟಿ.ಶ್ಯಾಮ್ ಭಟ್ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಸಲಹಾ ಸಮಿತಿಯ ಸದಸ್ಯ ಮತ್ತು ಸೇತುಭಂಧು- ಬ್ರಿಜ್‍ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಹಾಗೂ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಸಲಹಾ ಸಮಿತಿಯ ಇನ್ನೊರ್ವ ಸದಸ್ಯ ಸ್ವಿಸ್ ಸಿಂಗಾಪುರ ಓವರ್‍ಸೀಸ್ ಎಂಟರ್‍ಪ್ರೈಸಸ್ ಸಿಂಗಾಪುರ ಇದರ ಮಾಜಿ ಅಧ್ಯಕ್ಷರಾಗಿದ್ದ ಶ್ರೀ.ಚಂದ್ರಕಾಂತ್ ರಾವ್ ಐ ಅಭ್ಯಾಗತರಾಗಿ ಉಪಸ್ಥಿತರಿರುತ್ತಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ನಿರ್ದೇಶಕ ಶ್ರೀ.ಬಲರಾಮ ಆಚಾರ್ಯ.ಜಿ, ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ,ವಿಶ್ವಾಸ್ ಶೆಣೈ, ಸಂಚಾಲಕ ಶ್ರೀ.ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿ ಶ್ರೀ.ಮುರಳೀಧರ ಭಟ್ ಮತ್ತು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿಸುತ್ತಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರು, ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರು, ಪುತ್ತೂರಿನ ಗಣ್ಯರು ಸಮಾರಂಭದಲ್ಲಿ ಭಾಗವಹಿಸುತ್ತಾರೆ ಎಂದವರು ತಿಳಿಸಿದ್ದಾರೆ.
ಅಲ್ಲದೆ ದಿ.ಜಿ.ಎಲ್.ಆಚಾರ್ಯ ಅವರ 100ನೇ ಜನ್ಮದಿನಾಚರಣೆಯ ಸವಿ ನೆನಪಿನಲ್ಲಿ ಕಾಲೇಜಿನ ಮುಂಬಾಗದಲ್ಲಿ ನೂತನವಾಗಿ ನಿರ್ಮಿಸಿದ ಕಾರಂಜಿಯ ಹಸ್ತಾಂತರ ಕಾರ್ಯಕ್ರಮವೂ ನಡೆಯಲಿದೆ.
ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀ.ಮುರಳೀಧರ ಭಟ್, ನಿರ್ದೇಶಕ ಶ್ರೀ.ರವಿಕೃಷ್ಣ.ಡಿ.ಕಲ್ಲಾಜೆ, ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮತ್ತು ಮಾಧ್ಯಮ ವಿಭಾಗದ ಸಹ ಸಂಯೋಜಕ ಹರಿಪ್ರಸಾದ್.ಡಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಮಾರ್ಚ್ 1 , 1916 ರಲ್ಲಿ ಪ್ರಾರಂಭವಾದ ವಿವೇಕಾನಂದ ವಿದ್ಯಾವರ್ಧಕ ಸಂಘವು ಶಿಶುಮಂದಿರದಿಂದ ತೊಡಗಿ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಯವರೆಗೆ ಒಟ್ಟು 78ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ವಿದ್ಯಾಭಾರತಿಯ ಪರಿಕಲ್ಪನೆಯಂತೆ ತನ್ನೆಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿದೆ.
ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ನಡೆಸಲ್ಪಡುವ ಸಂಸ್ಥೆಗಳಲ್ಲಿ ಕರಾವಳಿ ಕರ್ನಾಟಕದ ಉತ್ತಮ ತಾಂತ್ರಿಕ ಶಿಕ್ಷಣ ಸಂಸ್ಥೆ ಎಂದು ಹೆಸರಾಗಿರುವ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯೂ ಒಂದು. ಆರು ಪದವಿ ವಿಭಾಗಗಳು ಮತ್ತು ಎರಡು ಸ್ನಾಕೋತ್ತರ ವಿಭಾಗಗಳಲ್ಲಿ ಸುಮಾರು 2000 ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಮಾಡುತ್ತಿದ್ದಾರೆ. ಇಲ್ಲಿ ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಅವಕಾಶವನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗೆ ಬೇಕಾದ ಎಲ್ಲಾ ಸವಲತ್ತನ್ನೂ ನೀಡಲಾಗುತ್ತದೆ. ಮಾತೃ ಸಂಸ್ಥೆಯ ಆಶಯಕ್ಕೆ ಅನುಸಾರವಾಗಿ ಇಲ್ಲಿ ಸಂಸ್ಕಾರಯುತ ಶಿಕ್ಷಣವನ್ನು ನೀಡಲಾಗುತ್ತದೆ. ಕಲಿತು ಹೊರಬಂದ ಪ್ರತಿಯೊಬ್ಬ ವಿದ್ಯಾರ್ಥಿಯು ಸಮಾಜಕ್ಕೆ ಒಳಿತನ್ನು ಮಾಡುವ ಪ್ರಜ್ಞಾವಂತ ನಾಗರಿಕ ಎನ್ನಿಸುವ ರೀತಿಯಲ್ಲಿ ರಾಷ್ಟ್ರಾಭಿಮಾನವನ್ನು ಬೆಳೆಸಲಾಗುತ್ತದೆ. ಇಲ್ಲಿನ ವಿದ್ಯಾರ್ಥಿಗಳು ಪ್ರತಿವರ್ಷವೂ ಉತ್ತಮ ಫಲಿತಾಂಶವನ್ನು ದಾಖಲಿಸುತ್ತಿದ್ದು ಅರ್ಹ ವಿದ್ಯಾರ್ಥಿಗಳು ಕ್ಯಾಂಪಸ್ ನೇಮಕಾತಿಯ ಮೂಲಕ ಪ್ರತಿಷ್ಟಿತ ಕಂಪೆನಿಗಳಲ್ಲಿ ಹುದ್ದೆಯನ್ನು ಗಳಿಸಿಕೊಳ್ಳುತ್ತಿದ್ದಾರೆ.