ಬ್ರಿಟಿಷರು ತೊಲಗಿದರೂ ಭಾಷಾ ದಾಸ್ಯ ತೊಲಗಿಲ್ಲ: ರಾಘವೇಶ್ವರ ಶ್ರೀ…

ಗೋಕರ್ಣ: ಬ್ರಿಟಿಷರು ಭಾರತವನ್ನು ಬಿಟ್ಟು ತೊಗಲಿದರೂ, ಅವರ ಭಾಷೆ ಮಾತ್ರ ಭಾರತವನ್ನು ಬಿಟ್ಟುಹೋಗಿಲ್ಲ; ನಿತ್ಯಜೀವನದಲ್ಲಿ ಅದರ ಪ್ರಭಾವ ಹೆಚ್ಚುತ್ತಿದೆ. ವರ್ಷದಿಂದ ವರ್ಷಕ್ಕೆ ಅದು ಭಾರತದ ಭಾಷೆಗಳನ್ನು ನುಂಗುತ್ತಿದೆ. ಅಳಿವಿನಂಚಿನಲ್ಲಿರುವ ಭಾಷೆಗಳ ಸಾಲಿನಲ್ಲಿ ಕನ್ನಡವೂ ಸೇರಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 37ನೇ ದಿನವಾದ ಶುಕ್ರವಾರ ಜಾಲತಾಣಿಗರು, ಶ್ರೀಸೇವಾ ಶ್ರೀ ಮತ್ತು ದಿಶಾದರ್ಶಿ ವತಿಯಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.
ನಮ್ಮ ಭಾಷೆಗೆ ಏನಾಗುತ್ತಿದೆ ಎಂಬ ಬಗ್ಗೆ ಯಾರೂ ಗಂಭೀರ ಚಿಂತನೆ ಮಾಡುತ್ತಿಲ್ಲ; ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ಒಂದೆರಡು ತಲೆಮಾರುಗಳಲ್ಲಿ ಕನ್ನಡದ ಸ್ಥಿತಿ ಏನಾಗಬಹುದು ಎಂಬ ಬಗ್ಗೆ ಚಿಂತನೆ ಮಾಡೋಣ. ನಮ್ಮ ಭಾಷೆಯನ್ನು ಪರಿಪೂರ್ಣವಾಗಿ ಬೆಳೆಸಿದಾಗ ನಮಗೆ ನಿಜವಾದ ಸ್ವಾತಂತ್ರ್ಯ ಲಭಿಸಿದಂತಾಗುತ್ತದೆ ಎಂದರು.
ದಿನಕ್ಕೊಂದು ಇಂಗ್ಲಿಷ್ ಪದ ತ್ಯಜಿಸುವ ಅಭಿಯಾನದಲ್ಲಿ “ಯೂಸ್” ಎಂಬ ಪದವನ್ನು ಬಿಡುವಂತೆ ಕರೆ ನೀಡಿದರು. ಅತಿಯಾಗಿ ಈ ಆಂಗ್ಲಪದವನ್ನು ಬಳಸಲಾಗುತ್ತಿದ್ದು, ಬಳಕೆ, ಉಪಯೋಗ, ವಿನಿಯೋಗ, ಪ್ರಯೋಜನ, ಉಪಯುಕ್ತ ಮುಂತಾದ ಶಬ್ದಗಳನ್ನು ಬಳಸಬಹುದು ಎಂದು ಸಲಹೆ ಮಾಡಿದರು. ಈ ಪದಗಳು ಇಂದು ಕೋಶದಲ್ಲಷ್ಟೇ ಉಳಿದಿವೆ ಎಂದು ವಿಷಾದಿಸಿದರು.
ಇಂಗ್ಲಿಷ್ ಮಾತನಾಡುವ ಅನಿವಾರ್ಯತೆ ಬಂದರೆ ಆ ಭಾಷೆಯಲ್ಲಿ ಮಾತನಾಡೋಣ; ಆದರೆ ಕನ್ನಡದ ಮಧ್ಯೆ ಈ ಪದಗಳನ್ನು ತೂರಿಸಬೇಡಿ ಎಂದು ತಾಕೀತು ಮಾಡಿದರು. ಬೇರೆ ಭಾಷೆಯ ಮನೆಬಾಗಿಲಿಗೆ ಹೋಗಿ ಭಿಕ್ಷೆ ಬೇಡುವುದು ಬಿಟ್ಟು, ನಮ್ಮ ಸಮೃದ್ಧತೆಯನ್ನು ಬಳಸಿಕೊಳ್ಳೋಣ ಎಂದು ಕರೆ ನೀಡಿದರು.
ಸ್ವತಂತ್ರ ಭಾರತದಲ್ಲಿ ಸಾಕಷ್ಟು ಒಳ್ಳೆಯ ಕಾರ್ಯಗಳಾಗಿವೆ. ಬ್ರಿಟಿಷರು ಭಾರತವನ್ನು ಬಿಟ್ಟುಹೋದ ಸಂದರ್ಭವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಭಾರತದಲ್ಲಿ ಭಾರತೀಯತೆ ಮೆರೆಯುವಂತಾಗಬೇಕು. ತನ್ನತನ ಮೆರೆದು ಆತ್ಮನಿರ್ಭರವಾಗಬೇಕು; ಪ್ರಜೆಗಳಾಗಿ ನಮಗೆ ವಿಶೇಷ ಕರ್ತವ್ಯವಿದೆ. ನಾವು ನಮ್ಮ ಕರ್ತವ್ಯ ನಿಭಾಯಿಸದಿದ್ದರೆ ದೇಶ ಹಾಳಾಗುತ್ತದೆ ಎಂದು ಎಚ್ಚರಿಸಿದರು.
ಜಾಲತಾಣಗಳು ಜನರ ಉಪಯೋಗಕ್ಕೆ ಬಂದದ್ದು; ಆದರೆ ಅದರಿಂದ ಎಷ್ಟು ಅನಾಹುತಗಳಾಗುತ್ತಿವೆ ಎನ್ನುವುದನ್ನೂ ನಾವು ನೋಡುತ್ತಿದ್ದೇವೆ. ಆದರೆ ಶ್ರೀಮಠದ ಅಕ್ಷರ ಯೋಧರು ಜಾಲತಾಣವನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು. ಮಠಕ್ಕಾಗಿ ಮಾತ್ರವಲ್ಲದೇ ಧರ್ಮಕ್ಕಾಗಿ, ದೇಶಕ್ಕಾಗಿ, ಒಳಿತಿಗಾಗಿ ಅಕ್ಷರ ಆಂದೋಲನವನ್ನು ಮಾಡಬೇಕು ಎಂದು ಸೂಚಿಸಿದರು.
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಶ್ರೀಗಳ ದರ್ಶನಾಶೀರ್ವಾದ ಪಡೆದರು. ಮಾ ಗೋ ಪ್ರಾಡಕ್ಟ್ಸ್ ಹೊರತಂದಿರುವ 15 ಬಗೆಯ ಮಂಗಲದ್ರವ್ಯಗಳನ್ನು ಒಳಗೊಂಡ ಪೂಜಾ ಸಂಚಿಯನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು. ಪಟ್ಟೇಗಾರ ಸಮಾಜ ವತಿಯಿಂದ ಸ್ವರ್ಣಪಾದುಕಾ ಪೂಜೆ ನೆರವೇರಿತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಡೆಸುವ ಮದ್ಯವರ್ಜನ ಶಿಬಿರದ ಆಹ್ವಾನ ಪತ್ರಿಕೆಯನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್.ಹೆಗಡೆ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕೋಶಾಧ್ಯಕ್ಷ ಸಂಜಯ ಪ್ರಭು, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜೆ.ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಪಿಆರ್‍ಓ ಎಂ.ಎನ್.ಮಹೇಶ ಭಟ್ಟ, ಸಾಮಾಜಿಕ ಕಾರ್ಯಕರ್ತ ಮಹೇಶ ಶೆಟ್ಟಿ, ಸರ್ವಸಮಾಜ ಸಂಯೋಜಕ ಕೆ.ಎನ್.ಹೆಗಡೆ, ಎಂಜಿನಿಯರ್ ವಿಷ್ಣು ಬನಾರಿ ಮತ್ತಿತರರು ಉಪಸ್ಥಿತರಿದ್ದರು.

whatsapp image 2025 08 15 at 6.46.03 pm (1)

Related Articles

Back to top button