ವಿವೇಕಾನಂದ ಸ್ನಾತಕೋತ್ತರ ಕೇಂದ್ರದಲ್ಲಿ ವಿಶೇಷ ಉಪನ್ಯಾಸ…..
ಪುತ್ತೂರು: ಪತ್ರಿಕೋದ್ಯಮ ಎನ್ನುವಂತಹದ್ದು ಮಹತ್ತರ ಜವಾಬ್ದಾರಿ. ಪತ್ರಕರ್ತ ಸಮಾಜದ ಕನ್ನಡಿಯಂತೆ ಕಾರ್ಯನಿರ್ವಹಿಸುವ ಮೂಲಕ ವಾಸ್ತವ ವರದಿಯನ್ನು ಸಮಾಜಕ್ಕೆ ನೀಡಬೇಕು. ಬದಲಾಗಿ ಪತ್ರಕರ್ತ ತನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಸುದ್ದಿಗೆ ಸೇರಿಸಬಾರದು. ಜನರಿಗೆ ವಾಸ್ತವ ವರದಿಯನ್ನು ತಿಳಿಸುವ ಮೂಲಕ ಅವರಲ್ಲಿ ವಿಶ್ಲೇಷಿಸುವ ಮನೋಭಾವವನ್ನು ಮೂಡಿಸುವ ಕಾರಣಕ್ಕಾಗಿಯೇ ಪತ್ರಿಕೋದ್ಯಮ ಕ್ಷೇತ್ರವನ್ನು ಸಂವಿಧಾನದ ನಾಲ್ಕನೇ ಅಂಗವೆನ್ನುತ್ತಾರೆ ಎಂದು ಹಿರಿಯ ಪತ್ರಕರ್ತ, ಅನುವಾದಕ ಎ.ವಿ. ಚಿತ್ತರಂಜನ್ ದಾಸ್ ಹೇಳಿದರು.
ಅವರು ಮಂಗಳವಾರ ಪುತ್ತೂರಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಹಯೋಗದೊಂದಿಗೆ ‘ರೇಡಿಯೋ ಪತ್ರಿಕೋದ್ಯಮ ಹಾಗೂ ಭಾಷಾಂತರ’ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಡಾ. ಎಚ್.ಜಿ. ಶ್ರೀಧರ್ ಮಾತನಾಡಿ, ತಂತ್ರಜ್ಞಾನದಲ್ಲಿ ಇಂದು ಬಹಳಷ್ಟು ಮುಂದುವರಿದಿದ್ದೇವೆ. ಈ ತಂತ್ರಜ್ಞಾನದಿಂದ ಅವಕಾಶಗಳನ್ನು ಬಳಸಿಕೊಂಡು ಸಾಧನೆಯನ್ನು ಮಾಡಬಹುದು. ದುಡಿಯುವ ಹಂಬಲವಿದ್ದರೆ, ಸೃಜನಶೀಲತೆ ಇದ್ದರೆ ಬದುಕಲು ನೂರು ದಾರಿಗಳಿವೆ. ಈ ದಾರಿಯನ್ನು ಕಾಣುವ ಮನಸ್ಸನ್ನು ಎಲ್ಲರೂ ಮಾಡಬೇಕು. ಆ ಮೂಲಕ ಅವರವರ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ನಮ್ಮಮುಂದೆಯೇ ಇದೆ ಎಂದರು.
ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಉಪನ್ಯಾಸಕಿ ಪ್ರಜ್ಞಾ ಬಾರ್ಯ ವಂದಿಸಿದರು. ವಿದ್ಯಾರ್ಥಿನಿ ಸೀಮಾ ಪೋನಡ್ಕ ಕಾರ್ಯಕ್ರಮ ನಿರೂಪಿಸಿದರು.