ಆಶ್ಲೇಷಾ ನಕ್ಷತ್ರ ವಿಶೇಷ: ಸುಬ್ರಹ್ಮಣ್ಯದಲ್ಲಿ ಭಕ್ತ ಸಂದಣಿ….
ಸುಬ್ರಹ್ಮಣ್ಯ: ಆಶ್ಲೇಷಾ ನಕ್ಷತ್ರ ವಿಶೇಷ ದಿನದಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ.
ರವಿವಾರ 2,203 ಆಶ್ಲೇಷಾ ಬಲಿ ಸೇವೆ ನಡೆದಿರುವುದು ದೇವಸ್ಥಾನದ ಇತಿಹಾಸದಲ್ಲಿಯೇ 2ನೇ ಗರಿಷ್ಠ ದಾಖಲೆ. ಈ ಹಿಂದೆ ಒಂದೇ ದಿನ 2,300 ಆಶ್ಲೇಷಾ ಬಲಿ ಸೇವೆ ನಡೆದಿರು ವುದು ದಾಖಲೆಯಾಗಿತ್ತು. ಸಂಜೆಯೂ ಆಶ್ಲೇಷಾ ಸೇವೆಗಳು ನಡೆದವು.ಇದಲ್ಲದೇ 423 ನಾಗಪ್ರತಿಷ್ಠೆ ,114 ಮಹಾ ಪೂಜೆ , 7 ಮಹಾಭಿಷೇಕ , 25 ಉತ್ಸವಗಳು , 130 ತುಲಾಭಾರ ಮತ್ತು 188 ಸರ್ಪ ಸಂಸ್ಕಾರ ಸೇವೆ ನಡೆದಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.
ಶನಿವಾರವೇ ದೇವಸ್ಥಾನದ ಹಾಗೂ ಖಾಸಗಿ ವಸತಿಗೃಹಗಳು ಭರ್ತಿಯಾಗಿ ದ್ದವು. ರವಿವಾರ ಬಂದವರಿಗೆ ತಂಗಲು ಕೊಠಡಿ ಸಮಸ್ಯೆ ಉಂಟಾಯಿತು.
ಕ್ಷೇತ್ರದಲ್ಲಿ ಭಕ್ತರ ಜತೆ ವಾಹನ ದಟ್ಟಣೆಯೂ ಅಧಿಕವಿತ್ತು. ಕ್ಷೇತ್ರದಲ್ಲಿರುವ ಪಾರ್ಕಿಂಗ್ ಜಾಗಗಳು ಭರ್ತಿಯಾಗಿದ್ದವು. ಕುಮಾರಧಾರೆಯಿಂದ ರಥಬೀದಿ ತನಕ ಚತುಷ್ಪಥ ರಸ್ತೆ ವಿಸ್ತರಣೆ ಕಾಮಗಾರಿಯಿಂದ ನಗರದ ಪರಿಸರವಿಡೀ ಧೂಳು ಆವರಿಸಿರುವುದರಿಂದ ಭಕ್ತರು ಧೂಳಿನ ಸಮಸ್ಯೆಗೆ ತುತ್ತಾದರು.