ನಾಳೆ ದ.ಕ. ಜಿಲ್ಲೆ ಪೂರ್ಣ ಬಂದ್….
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎರಡು ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಮಾ.28ರಂದು ಸಂಪೂರ್ಣ ಜಿಲ್ಲೆಯನ್ನು ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 7 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ದ.ಕ. ಜಿಲ್ಲೆಯ ಕಾಸರಗೋಡು, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಕರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಸಂಪೂರ್ಣವಾಗಿ ಸಾರ್ವಜನಿಕರ ಓಡಾಟ ನಿರ್ಬಂದಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಕರಣಗಳು ದಾಖಲಾಗಬಾರದೆನ್ನುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಈ ಕಟ್ಟುನಿಟ್ಟಿನ ಆದೇಶ ಜಾರಿಗೆ ತರಲಾಗಿದ್ದು, ಸಾರ್ವಜನಿಕರು ಮನೆಯಲ್ಲೇ ಇದ್ದು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ನಾಳೆ ಯಾವುದೇ ಅಂಗಡಿ ಮುಂಗಟ್ಟು, ವಾಣಿಜ್ಯ ವ್ಯವಹಾರಗಳು ಇರುವುದಿಲ್ಲ. ನಾಳಿನ ಪರಿಸ್ಥಿತಿ ನೋಡಿಕೊಂಡು ಬಂದ್ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.