ಗುರುಪುರ ನೂತನ ಸೇತುವೆ ಲೋಕಾರ್ಪಣೆ…
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169 ಗುರುಪುರದ ನದಿಗೆ ನಿರ್ಮಿಸಲಾದ ನೂತನ ಸೇತುವೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕುಲಶೇಖರ- ಮೂಡುಬಿದಿರೆ- ಕಾರ್ಕಳ ಮಧ್ಯೆ 45 ಮೀಟರ್ ಅಗಲದ ಚತುಷ್ಪಥ ಕಾಮಗಾರಿ 6 ತಿಂಗಳೊಳಗೆ ಟೆಂಡರ್ ಹಂತಕ್ಕೆ ಬಂದು ವರ್ಷದೊಳಗೆ ಕಾಮಗಾರಿ ಆರಂಭವಾಗಲಿದೆ. ಕ್ಷಿಪ್ರವಾಗಿ ಪೂರ್ಣಗೊಂಡ ಗುರುಪುರ ಸೇತುವೆ ಕಾಮಗಾರಿ ರೀತಿಯಲ್ಲಿಯೇ ಎರಡು ವರ್ಷದೊಳಗೆ ಈ ಹೆದ್ದಾರಿಯು ಪೂರ್ಣಗೊಳ್ಳಲಿದೆ ಎಂದರು.
ಕೋಟ ಗುರುಪುರ ಸೇತುವೆಯನ್ನು ಕೇವಲ 16 ತಿಂಗಳಲ್ಲಿ ಮುಗಿಸುವ ಮೂಲಕ ಸಂಸದರು ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಶ್ಲಾಘಿಸಿದರು. ಶಾಸಕ ಡಾ| ಭರತ್ ಶೆಟ್ಟಿ ಮಾತನಾಡಿ, ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್, ಐಟಿ ಪಾರ್ಕ್ ಯೋಜನೆಗೆ ಈ ನೂತನ ಸೇತುವೆ ನಿರ್ಮಾಣ ಮೂಲಕ ಸಹಕಾರಿಯಾಗಿದೆ. ನಳಿನ್ ಅವರು ಗುರುಪುರ ಸೇತುವೆ ತ್ವರಿತವಾಗಿ ಮಾಡುವ ಮೂಲಕ ಎಲ್ಲ ಟೀಕೆಗಳಿಗೂ ತಕ್ಕ ಉತ್ತರ ನೀಡಿದ್ದಾರೆ ಎಂದರು.
ಗುರುಪುರ ಸೇತುವೆ ಕಾಮಗಾರಿಯ ಉಸ್ತುವಾರಿ ವಹಿಸಿದ್ದ ಮುಗ್ರೋಡಿ ಕನ್‌ಸ್ಟ್ರಕ್ಷನ್‌ನ ಮಾಲಕ ಡಿ. ಸುಧಾಕರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಹರಿಕೃಷ್ಣ ಬಂಟ್ವಾಳ್, ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಶೆಟ್ಟಿ ಕಣ್ಣೂರು, ಮೂಡ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ರಾಮಚಂದ್ರ ಬೈಕಂಪಾಡಿ, ಮುಗ್ರೋಡಿ ಕನ್ಸ್ಟ್ರಕ್ಷನ್ ಮಾಲಕರಾದ ಸುಧಾಕರ್ ಶೆಟ್ಟಿ ಮುಗ್ರೋಡಿ, ಮುಖಂಡರಾದ ಸತೀಶ್ ಕುಂಪಲ್, ಪೂಜಾ ಪೈ ಹಾಗೂ ಇನ್ನಿತರರು ಉಪಸ್ಥಿತರಿದ್ದರು.