1-5 ತರಗತಿಗಳಿಗೆ ಆನ್‌ಲೈನ್ ಶಿಕ್ಷಣಕ್ಕೆ ಸರಕಾರದಿಂದ ಅನುಮತಿ….
ಬೆಂಗಳೂರು: 1ರಿಂದ 5ನೇ ತರಗತಿಯ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಬೇಡವೆಂದು ರದ್ದು ಮಾಡಿದ್ದ ಸರಕಾರ ಈಗ ನಿಯಮಿತ ಅವಕಾಶ ನೀಡಿ ಹೊಸ ಆದೇಶ ಹೊರಡಿಸಿದೆ.
ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯದ ಮಾರ್ಗಸೂಚಿ ಮತ್ತು ರಾಜ್ಯ ಹೈಕೋರ್ಟ್ ಸಲಹೆಯಂತೆ ಆನ್‌ಲೈನ್ ಶಿಕ್ಷಣದ ಕುರಿತಾಗಿ ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್‌ಇ ಸಹಿತ ಎಲ್ಲ ಪಠ್ಯ ಕ್ರಮದ ಶಾಲೆಗಳಿಗೆ ಅನ್ವಯವಾಗುವಂತೆ ರಾಜ್ಯ ಸರಕಾರ ಹೊಸ ಆದೇಶ ಹೊರಡಿಸಿದೆ. ಆದರೆ ಇದಕ್ಕಾಗಿ ಹೆಚ್ಚುವರಿ ಶುಲ್ಕ ಪಡೆಯದಂತೆ ತಿಳಿಸಿದೆ.
ರಾಜ್ಯ ಸರಕಾರದ ಸಮಿತಿ ವರದಿ ನೀಡುವವರೆಗೂ ಹೊಸದಾಗಿ ಹೊರಡಿಸಿರುವ ಆದೇಶದಂತೆ ಆನ್‌ಲೈನ್ ತರಗತಿ ನಡೆಸಲು ಸರಕಾರ ಅನುಮತಿ ಕಲ್ಪಿಸಿ ಕೊಟ್ಟಿದೆ.
ಪೂರ್ವ ಪ್ರಾಥಮಿಕ ತರಗತಿಗಳಿಗೆ ಆನ್‌ಲೈನ್ ತರಗತಿ ಇರುವುದಿಲ್ಲ. ಆದರೆ 30 ನಿಮಿಷಗಳಿಗೆ ಮೀರದಂತೆ ಪಾಲಕರೊಂದಿಗೆ ಮಾತ್ರ ವಾರಕ್ಕೆ ಒಂದು ದಿನ ಆನ್‌ಲೈನ್ ಸಂವಹನ ಮತ್ತು ಮಾರ್ಗದರ್ಶನ ನೀಡಬಹುದು.
1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 30ರಿಂದ 45 ನಿಮಿಷ ಗಳ 2 ಅವಧಿ ಮೀರದಂತೆ ದಿನ ಬಿಟ್ಟು ದಿನ (ವಾರದಲ್ಲಿ ಗರಿಷ್ಠ 3 ದಿನ) ಆನ್‌ಲೈನ್ ಶಿಕ್ಷಣ ನೀಡಬಹುದು.
6ರಿಂದ 8ನೇ ತರಗತಿಯವರಿಗೆ 30ರಿಂದ 45 ನಿಮಿಷಗಳ 2 ಅವಧಿ ಮೀರದಂತೆ ವಾರದಲ್ಲಿ 5 ದಿನ, 9 ಮತ್ತು 10 ನೇ ತರಗತಿಯವರಿಗೆ 30ರಿಂದ 45 ನಿಮಿಷಗಳ 4 ಅವಧಿ ಮೀರದಂತೆ ವಾರದಲ್ಲಿ 5 ದಿನ ಸಿಂಕ್ರೋನಸ್ ವಿಧಾನದ ಮೂಲಕ ಆನ್‌ಲೈನ್ ತರಗತಿ ನಡೆಸಲು ಅವಕಾಶ ಕಲ್ಪಿಸಿದೆ.