ಪೆರಾಜೆ- ಸ್ವಾಮಿ ಕೊರಗಜ್ಜ ಮತ್ತು ಇತರ ಪರಿವಾರ ದೈವಗಳ ಪ್ರತಿಷ್ಠಾಪನಾ ಮಹೋತ್ಸವ…
ಬಂಟ್ವಾಳ: ಶ್ರದ್ಧಾ ಭಕ್ತಿಯಿಂದ ದೈವರಾಧನೆ ಮಾಡಿಕೊಂಡು ಧರ್ಮ ಕಾರ್ಯದ ಮೂಲಕ ಸಮಾಜಕ್ಕೆ ಒಳಿತಾಗುವಂತೆ ಜೀವನವನ್ನು ಸಾಗಿಸಬೇಕು. ಹಿರಿಯರ ಸಂಪ್ರದಾಯದಂತೆ ನಂಬಿಕೆಯಿಂದ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿದಾಗ ದೇವರ ಅನುಗ್ರಹ ಲಭಿಸುತ್ತದೆ ಎಂದು ವೇದಮೂರ್ತಿ ಕೇಕನಾಜೆ ಕೇಶವ ಭಟ್ಟರು ಹೇಳಿದರು.
ಅವರು ಪೆರಾಜೆಯಲ್ಲಿ ಸ್ವಾಮಿ ಕೊರಗಜ್ಜ ಮತ್ತು ಇತರ ಪರಿವಾರ ದೈವಗಳ ಪ್ರತಿಷ್ಠಾಪನಾ ಮಹೋತ್ಸವ ವಿಧಿವಿಧಾನಗಳನ್ನು ನೆರವೇರಿಸಿ ಧಾರ್ಮಿಕ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ನಿವೃತ್ತ ಶಿಕ್ಷಕ ಜಯಾನಂದ ಪೆರಾಜೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಟುಂಬ ವ್ಯವಸ್ಥೆ ಸಾಮಾಜಿಕ ಭದ್ರತೆಗೆ ಅಡಿಪಾಯವಾಗಿದೆ. ಸತ್ಕಾರ್ಯಗಳಿಂದ ಮಾನವನು ದೈವತ್ವಕ್ಕೇರುತ್ತಾನೆ. ಜಾತಿ ಮತ ನಂಬಿಕೆಗಳು ಬೇರೆ ಬೇರೆಯಾಗಿದ್ದರೂ ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂಬುದನ್ನು ನೆನಪಿನಲಿಟ್ಟುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ,ಸಚ್ಚಿದಾನಂದ ರೈ ಪಾಲ್ಯ ಗುತ್ತು, ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಗೌರವಾಧ್ಯಕ್ಷೆ ಭಾರತಿ ಪೆರಾಜೆ, ತರವಾಡು ಮನೆಯ ಮುಖ್ಯಸ್ಥ ಅಣ್ಣು ಮೊದಲಾದವರು ಉಪಸ್ಥಿತರಿದ್ದರು.
ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅನಿಲ್ ಕುಮಾರ್ ಪೆರಾಜೆ ಸ್ವಾಗತಿಸಿ ಪ್ರಸ್ತಾವನೆ ಗೈದರು. ಗ್ರಾ.ಪಂ. ಮಾಜಿ ಸದಸ್ಯ ಉಮೇಶ ಎಸ್.ಪಿ. ನಿರೂಪಿಸಿ ವಂದಿಸಿದರು.