ನಮ್ಮ ತೆರಿಗೆ ಹಣದ ಲಸಿಕೆಯನ್ನು ಆಡಳಿತ ಪಕ್ಷ ನಮಗೆ ಶೀಘ್ರದಲ್ಲಿ ದೊರಕಿಸಲಿ- ಎಂ. ವೆಂಕಪ್ಪ ಗೌಡ ಒತ್ತಾಯ…
ಸುಳ್ಯ: ನಮ್ಮ ರಾಜ್ಯಕ್ಕೆ ಈ ತನಕ 2.6 ಕೋಟಿ ಡೋಸ್ ಲಸಿಕೆ ಮಾತ್ರ ಬಂದಿದ್ದು ರಾಜ್ಯದ ಪ್ರತಿಯೊಬ್ಬರಿಗೂ 2 ಡೋಸ್ ಲಸಿಕೆ ನೀಡಬೇಕಾದಲ್ಲಿ 9.6 ಕೋಟಿ ಡೋಸ್ ವ್ಯಾಕ್ಸಿನ್ ನಮ್ಮ ರಾಜ್ಯಕ್ಕೆ ಬೇಕಾಗುತ್ತದೆ ಎಂಬ ಅಂಕಿ ಅಂಶಗಳನ್ನು ರಾಜ್ಯ ಸರ್ಕಾರವು ಇದೀಗ ನೀಡಿರುತ್ತದೆ. ಅದೇ ಪ್ರಕಾರ ಸುಳ್ಯ ತಾಲೂಕಿನಲ್ಲಿ 2011 ರ ಜನಗಣತಿಯ ಪ್ರಕಾರ 1 ಲಕ್ಷ 45 ಸಾವಿರ ಜನಸಂಖ್ಯೆ ಇದ್ದು ಪ್ರಸ್ತುತ ಆ ಸಂಖ್ಯೆ 1 ಲಕ್ಷದ 50 ಸಾವಿರಕ್ಕಿಂತಲೂ ಹೆಚ್ಚಾಗಿರುವ ಸಾಧ್ಯತೆ ಇರುವುದರಿಂದ ನಮ್ಮ ತಾಲೂಕಿಗೆ ಕಡಿಮೆ ಪಕ್ಷ 3 ಲಕ್ಷ ಡೋಸ್ ಲಸಿಕೆ ಅವಶ್ಯಕತೆ ಇರುತ್ತದೆ. ಆದರೆ ಸರ್ಕಾರದ ಮಾಹಿತಿಯ ಪ್ರಕಾರ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಒಟ್ಟಾಗಿ ಸುಳ್ಯ ತಾಲೂಕಿಗೆ ಈ ತನಕ 57 ಸಾವಿರ ಡೋಸ್ ಲಸಿಕೆ ಮಾತ್ರ ಸರಬರಾಜು ಆಗಿರುವುದರಿಂದ ಇನ್ನೂ 2 ಲಕ್ಷದ 50 ಸಾವಿರ ಡೋಸ್ ಲಸಿಕೆ ಸರಬರಾಜು ಆದಲ್ಲಿ ಸುಳ್ಯ ತಾಲೂಕಿನ ಸಂಪೂರ್ಣ ಜನತೆಗೆ ಲಸಿಕೆ ನೀಡುವರೇ ಸಾಧ್ಯವಾಗುತ್ತದೆ. ಪ್ರಸ್ತುತ ಲಸಿಕಾ ಕೇಂದ್ರಗಳಿಗೆ 50-100 ರ ಡೋಸ್ ಗಳ ಸಂಖ್ಯೆಯಲ್ಲಿ ಲಸಿಕೆ ಸರಬರಾಜು ಆಗುತ್ತಿರುವುದರಿಂದ ಸರ್ಕಾರ ನಿರೀಕ್ಷಿಸಿದಂತೆ ಸಂಪೂರ್ಣ ಜನಕ್ಕೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಈ ವಾಸ್ತವ ಅಂಶ ನಮ್ಮ ತಾಲೂಕಿನ ಉನ್ನತ ಮಟ್ಟದ ಜನಪ್ರತಿನಿದಿನಗಳಿಗೆ ತಿಳಿದಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯನ್ನು ಸರ್ಕಾರದ ಮಟ್ಟದಿಂದ ನಮ್ಮ ತಾಲೂಕಿಗೆ ತರಿಸುವ ಕೆಲಸವನ್ನು ಮಾಡದೆ ಲಸಿಕೆ ಕೇಂದ್ರದಲ್ಲಿ ಎದೆ ಉಬ್ಬರಿಸಿಕೊಂಡು ಅಧಿಕಾರಿಗಳು ತರಿಸಿದ ಲಸಿಕೆಗಳನ್ನು ತಾವೇ ತರಿಸಿದ್ದು ಎಂದು ಬಿಂಬಿಸುತ್ತ ಮತ್ತು ಅದನ್ನು ತಮ್ಮ ಕಿಸೆಯಿಂದ ನೀಡುತ್ತಿರುವ ರೀತಿಯಲ್ಲಿ ವರ್ತಿಸುತ್ತಿರವುದು ತೀರಾ ನಾಚಿಕೆಗೇಡಿನ ಸಂಗತಿ. ಅಂಥವರು ಈಗ ಸರ್ಕಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ತರಿಸಿ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕೆಲಸವನ್ನು ಮಾಡಲಿ ಎಂದು ಕಾಂಗ್ರೆಸ್ ನಾಯಕ, ನ. ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.