ತೆಂಕಿಲ ಗುಡ್ಡ ಕುಸಿತ ಭಯ: ಅಧ್ಯಯನ ನಂತರ ಕ್ರಮ-ಸ್ಥಳೀಯರ ಮನವಿಗೆ ಸ್ಪಂಧಿಸಿ ಜಿಲ್ಲಾಧಿಕಾರಿ ಹೇಳಿಕೆ….
ಪುತ್ತೂರು: ತೆಂಕಿಲ ದರ್ಖಾಸ್ ಗುಡ್ಡದ ಬಗ್ಗೆ ಭೂ ವಿಜ್ಞಾನ ಇಲಾಖೆಯ ವತಿಯಿಂದ ಸಮಗ್ರವಾಗಿ ಅಧ್ಯಯನ ನಡೆಸಿ ನಂತರ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದರು.
ಶುಕ್ರವಾರ ಪುತ್ತೂರು ಮಿನಿವಿಧಾನಸೌಧದ ಉಪವಿಭಾಗಾಧಿಕಾರಿ ಅವರ ಕೋರ್ಟ್ ಸಭಾಂಗಣದಲ್ಲಿ ತೆಂಕಿಲದ ಸಂತ್ರಸ್ತರು ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಿದ ಸಂದರ್ಭದಲ್ಲಿ ಅವರು ಈ ಮಾತುಗಳನ್ನು ಹೇಳಿದರು.
ಗುಡ್ಡದ ಮೇಲ್ಭಾಗದಲ್ಲಿದ್ದ 12 ಕುಟುಂಬಗಳನ್ನು ಈಗಾಗಲೇ ಅಲ್ಲಿಂದ ಸ್ಥಳಾಂತರ ಮಾಡಲಾಗಿದೆ. ಅವರಿಗೆ ಬೇರೆ ಪ್ರದೇಶದಲ್ಲಿ ಮನೆ ನೀಡುವ ವ್ಯವಸ್ಥೆ ನಡೆಸಲಾಗುತ್ತಿದೆ. ಈ ಗುಡ್ಡದ ಕೆಳಭಾಗದಲ್ಲಿರುವ ಸುಮಾರು 20 ಕ್ಕೂ ಹೆಚ್ಚು ಮನೆಗಳ ಸ್ಥಳಾಂತರ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಭೂ ವಿಜ್ಞಾನ ಇಲಾಖೆಯಿಂದ ಅಧ್ಯಯನ ನಡೆಸಿದ ನಂತರವಷ್ಟೇ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ತೆಂಕಿಲ ಗುಡ್ಡ ಸಂತ್ರಸ್ತರು ದರ್ಖಾಸ್ ಗುಡ್ಡವನ್ನು ಪರಿಶೀಲನೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆಯೂ ಚಿಂತನೆ ನಡೆಸಲಾಗುವುದು. ಒಂದು ವೇಳೆ ಭೂವಿಜ್ಞಾನ ಇಲಾಖೆ ನಡೆಸಿದ ಅಧ್ಯಯನದಿಂದ ತೆಂಕಿಲ ಗುಡ್ಡದಲ್ಲಿ ಅಪಾಯವಿಲ್ಲವೆಂದಾರೆ ಸ್ಥಳಾಂತರದ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೆ ಪ್ರಾಕೃತಿಕ ವಿಕೋಪಗಳು ಹೇಳಿಕೇಳಿ ಬರುವುದಿಲ್ಲ. ಹಾಗಾಗಿ ಮುನ್ನೆಚ್ಚರಿಕೆ ಕ್ರಮ ಅಗತ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಹಾಗಾದರೆ 12 ಕುಟುಂಬಗಳ ಸ್ಥಳಾಂತರ ಖಚಿತವೇ ಎಂಬ ಪ್ರಶ್ನೆಗೆ ಅಧ್ಯಯನದ ನಂತರ ಈ ಬಗ್ಗೆ ತಿಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಹೆಚ್.ಕೆ. ಕೃಷ್ಣಮೂರ್ತಿ ಮತ್ತು ಪೌರಾಯುಕ್ತೆ ರೂಪಾ ಶೆಟ್ಟಿ ಉಪಸ್ಥಿತರಿದ್ದರು.ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಿದ ನಿಯೋಗದಲ್ಲಿ ನಗರಸಭಾ ಸದಸ್ಯೆ ದೀಕ್ಷಾ ಪೈ. ಶರಾವತಿ, ಪ್ರಶಾಂತ್, ಹರೀಶ್, ಸೇಸಪ್ಪ ಗೌಡ, ಸುರೇಶ್, ಲೋಕೇಶ್, ಶ್ರೀಧರ್, ಮಿಥುನ್ ತೆಂಕಿಲ ಮತ್ತಿತರರು ಇದ್ದರು.