ಆಯುಷ್ಮಾನ್ ಯೋಜನೆ ಪುತ್ತೂರಿನಲ್ಲಿ ಜಾಗೃತಿ ಜಾಥಾ:ಆಯುಷ್ಮಾನ್ ಬಡವರಿಗೆ ಉಪಯುಕ್ತ ಯೋಜನೆ-ರಾಧಾಕೃಷ್ಣ ಬೋರ್ಕರ್
ಪುತ್ತೂರು: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿದಾರ ಕುಟುಂಬಗಳು ವಾರ್ಷಿಕವಾಗಿ ರೂ. 5ಲಕ್ಷ ತನಕದ ಆರೋಗ್ಯ ಸೇವೆ ಪಡೆಯಲು ಸಾಧ್ಯವಿದೆ. ಆರ್ಥಿಕ ಚೈತನ್ಯವಿಲ್ಲದ ಬಡವರಿಗೂ ಉತ್ತಮ ಆರೋಗ್ಯ ಸೇವೆ ಸಿಗವಂತಾಗಬೇಕು ಎಂಬ ಜನಪರ ಕಾಳಜಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಈ ಜನಪರ ಯೋಜನೆ ಬಡವರ ಪಾಲಿಗೆ ಅತ್ಯಂತ ಉಪಯಕ್ತ. ಆದರೂ ಮಾಹಿತಿಯ ಕೊರತೆಯಿಂದ ಬಹಳಷ್ಟು ಜನರು ವಂಚಿತರಾಗುತ್ತಿದ್ದಾರೆ ಎಂದು ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು.
ಅವರು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶುಕ್ರವಾರ ಪುತ್ತೂರಿನಲ್ಲಿ ಹಮ್ಮಿಕೊಳ್ಳಲಾದ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಬಳಿ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪರಿಶಿಷ್ಠ ಜಾತಿ ಮತ್ತು ಪಂಗಡ ವಿಭಾಗದ ಜಿಲ್ಲಾ ಸಂಯೋಜಕ ಸಚ್ಚಿದಾನಂದ್, ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಅಶೋಕ್‍ಕುಮಾರ್ ರೈ, ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ, ವೈದ್ಯರಾದ ಡಾ.ಜಗದೀಶ್, ಡಾ.ಜಯದೀಪ್, ಡಾ.ಜೈನಾಬ್ ಸುನು ಆಲಿ, ಆಸ್ಪತ್ರೆಯ ಆರೋಗ್ಯ ಸುರಕ್ಷಾ ಸಮಿತಿಯ ಸದಸ್ಯರಾದ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ರಾಜೇಶ್ ಬನ್ನೂರು, ರಫೀಕ್ ದರ್ಬೆ ಮತ್ತಿತರರು ಉಪಸ್ಥಿತರಿದ್ದರು. ಸರ್ಕಾರಿ ಆಸ್ಪತ್ರೆಯ ಎಕ್ಸರೇ ವಿಭಾಗದ ಎಂ.ಜಿ.ಗೌಡ ಅವರು ನಿರೂಪಿಸಿದರು.
ಜಾಥಾವು ಪುತ್ತೂರು ಸರ್ಕಾರಿ ಆಸ್ಪತ್ರೆಯಿಂದ ಆರಂಭಗೊಂಡು ಕೋರ್ಟ್ ರಸ್ತೆ, ಬಸ್ ನಿಲ್ದಾಣ, ಮಹಮ್ಮಾಯಿ ದೇವಸ್ಥಾನ ರಸ್ತೆಯಾಗಿ ಸಾಗಿ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಬಳಿ ಸಮಾಪನಗೊಂಡಿತು.
ಜಾಥಾದಲ್ಲಿ ವೈದ್ಯರುಗಳು, ಆಸ್ಪತ್ರೆಯ ಸಿಬ್ಬಂದಿ, ತಾಲೂಕಿನ ಆಶಾ ಕಾರ್ಯಕರ್ತೆಯರು, ಫಿಲೋಮಿನಾ ಕಾಲೇಜಿನ ಸಮಾಜಸೇವಾ ಕಾರ್ಯ ವಿಭಾಗ, ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜು, ಸರ್ಕಾರಿ ಮಹಿಳಾ ಕಾಲೇಜು ಹಾಗೂ ಸ್ಥಳೀಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.