ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಅಧ್ಯಾಪಕರ ಜ್ಞಾನಾಭಿವೃದ್ಧಿ ಕಾರ್ಯಾಗಾರ…
ಪುತ್ತೂರು: ಅಧ್ಯಾಪನ ಎನ್ನುವುದು ವೃತ್ತಿಯಲ್ಲ ಒಂದು ಜವಾಬ್ಧಾರಿ, ಇದನ್ನು ಅರಿತುಕೊಂಡು ಕಾರ್ಯ ನಿರ್ವಹಿಸಿದರೆ ಮಾತ್ರ ಆತನೊಬ್ಬ ಉತ್ತಮ ಅಧ್ಯಾಪಕನಾಗಬಲ್ಲ ಎಂದು ಐಐಐಟಿ ಧಾರವಾಡದ ಪೂರ್ವ ರಿಜಿಸ್ಟ್ರಾರ್ ಡಾ.ಚನ್ನಪ್ಪ.ಬಿ.ಅಕ್ಕಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಆಶ್ರಯದಲ್ಲಿ ನಡೆಯುತ್ತಿರುವ ಅತ್ಯುತ್ತಮ ಸಂಶೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಎನ್ನುವ ವಿಷಯದ ಬಗ್ಗೆ 3 ದಿನಗಳ ಅಧ್ಯಾಪಕರ ಜ್ಞಾನಾಭಿವೃದ್ಧಿ ಕಾರ್ಯಾಗಾರಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.
ನಮ್ಮ ವಿದ್ಯಾರ್ಹತೆ, ಡಿಗ್ರಿಗಳು ನಮಗೆ ಅವಕಾಶಗಳನ್ನು ಒದಗಿಸಿಕೊಡುತ್ತವೆ ಆದರೆ ಅದನ್ನು ಗಳಿಸಿ ಉಳಿಸಿಕೊಳ್ಳುವಲ್ಲಿ ನಮ್ಮ ಗುಣನಡತೆ ಮತ್ತು ವರ್ತನೆಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ ಎಂದರು. ಒಂದು ವಿಷಯವನ್ನು ಒಪ್ಪಿಕೊಂಡ ನಂತರ ಅದನ್ನು ಪೂರ್ಣಗೊಳಿಸುವ ಜವಾಬ್ಧಾರಿ ನಮ್ಮ ಮೇಲಿರುತ್ತದೆ ಇಲ್ಲವಾದರೆ ಇತರರು ನಮ್ಮ ಮೇಲಿಟ್ಟಿರುವ ನಂಬಿಕೆ ಮತ್ತು ಭರವಸೆಗಳನ್ನು ಕಳೆದುಕೊಳ್ಳುತ್ತೇವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಶ್ರೀ.ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ನಿರೀಕ್ಷೆ ಮತ್ತು ವಾಸ್ತವಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಆದರೆ ಅಧ್ಯಾಪಕರು ಎಲ್ಲಾ ವಿಷಯವನ್ನು ತಿಳಿದುಕೊಂಡಿರುತ್ತಾರೆ ಎನ್ನುವ ವಿದ್ಯಾರ್ಥಿಗಳ ಮನೋಭಾವಕ್ಕೆ ತಕ್ಕಂತೆ ಕಾಲಕಾಲಕ್ಕೆ ತಮ್ಮನ್ನು ತಾವು ಎತ್ತರಿಸಿಕೊಳ್ಳುವ ಸವಾಲು ಅಧ್ಯಾಪಕರಿಗಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಸೂಕ್ತವೆನಿಸುತ್ತವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ, ಕಾರ್ಯಕ್ರಮದ ಸಂಚಾಲಕ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ.ನಿಶ್ಚಯ್ ಕುಮಾರ್ ಹೆಗ್ಡೆ, ಸಂಯೋಜಕರುಗಳಾದ ಡಾ.ಜೀವಿತ.ಬಿ.ಕೆ ಮತ್ತು ಪ್ರೊ.ಕೃಷಮೋಹನ್.ಎ.ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ಮಹೇಶ್‍ಪ್ರಸನ್ನ.ಕೆ ಸ್ವಾಗತಿಸಿ, ಪ್ರೊ.ಕೃಷಮೋಹನ್.ಎ.ಜೆ ವಂದಿಸಿದರು. ವಿದ್ಯಾರ್ಥಿನಿಯರಾದ ತಾಶ್ವಿ ರೈ ಮತ್ತು ಸನ್ಮಯ.ಐ.ಕೆ ಕಾರ್ಯಕ್ರಮ ನಿರ್ವಹಿಸಿದರು.