ಗಾಂಧೀಜಿ ಆದರ್ಶದ ಸಂಕಲ್ಪದ ಹೋರಾಟದ ಅಗತ್ಯವಿದೆ-ನಿಕೇತ್ ರಾಜ್ ಮೌರ್ಯ….
ಪುತ್ತೂರು: ಗಾಂಧೀಜಿಯನ್ನು ಮರೆಸುವ ಷಡ್ಯಂತ್ರ ವ್ಯವಸ್ಥಿವಾಗಿ ನಡೆಯುತ್ತಿದ್ದು, ಗಾಂದೀಜಿ ಎಂದೂ ಮರೆಯುವ ವ್ಯಕ್ತಿಯಲ್ಲ ಅವರು ಹೃದಯದಲ್ಲಿ ಮೆರೆಯುವವರು ಆಗಿದ್ದಾರೆ. ಅವರ ಅದರ್ಶದ ಸಂಕಲ್ಪದ ಹೋರಾಟ ನಡೆಸುವ ಅಗತ್ಯವಿದೆ ಎಂದು ಸಾಮಾಜಿಕ ಹೋರಾಟಗಾರ ನಿಕೇತ್‍ರಾಜ್ ಮೌರ್ಯ ಹೇಳಿದರು.
ಅವರು ಶನಿವಾರ ಯಂಗ್ ಬ್ರಿಗೇಡ್ ಪುತ್ತೂರು ಇದರ ವತಿಯಿಂದ ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ `ನಮ್ಮ ನಡಿಗೆ ಗಾಂಧಿಯೆಡೆಗೆ’ ಕಾಲ್ನಡಿಗೆ ಜಾಥಾದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಗಾಂಧೀಜಿ ಬಗ್ಗೆ ಪುಂಖಾನುಪುಂಖವಾಗಿ ಸುಳ್ಳು ಪುಕಾರುಗಳನ್ನು ಹಬ್ಬಿಸಲಾಗುತ್ತಿದೆ. ಯಾವ ಗಾಂಧಿಯನ್ನು ಮರೆಯಲು ಸಾಧ್ಯವಿಲ್ಲವೋ ಅಂತಹ ಮೇರು ವ್ಯಕ್ತಿಯನ್ನು ದೇಶ ಒಡೆದವರು ಎಂಬ ಸುಳ್ಳು ಪೋಣಿಸಿ ಪ್ರಚಾರ ಮಾಡುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಗಾಂಧೀಜಿಯ ಭಾವ ಚಿತ್ರಕ್ಕೆ ಗುಂಡು ಹೊಡೆದು ಗೋಡ್ಸೆಗೆ ಜೈ ಎನ್ನುತ್ತಾರೆ. ಗಾಂಧಿ ಪ್ರತಿಮೆಯನ್ನು ವಿಕೃತಗೊಳಿಸಿ ಸಂತಸ ಹಂಚಿಕೊಳ್ಳುತ್ತಿದ್ದಾರೆ. ಇಂತಹ ಷಡ್ಯಂತ್ರಗಳನ್ನು ತಡೆಯಲು ಸಮಾಜಕ್ಕೆ ಸತ್ಯವನ್ನು ಹೇಳ ಬೇಕಾಗಿರುವ ಅನಿವಾರ್ಯತೆಯಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಯಂಗ್ ಬ್ರಿಗೇಡ್ ರಾಜ್ಯಾಧ್ಯಕ್ಷ ಜುನೈದ್ ಪಿ.ಕೆ ಮಾತನಾಡಿ ಗಾಂಧೀಜಿ ಸಿದ್ದಾಂತಗಳು ದುರ್ಬಳೆಯಾಗುತ್ತಿದ್ದು, ಅವರ ತತ್ವಗಳು ತೋರ್ಪಡಿಕೆ ಸೀಮಿತವಾಗುತ್ತಿದೆ. ಅಹಿಂಸೆಯಿಂದ ಮಾತ್ರ ದೇಶದ ಉಳಿವು ಸಾಧ್ಯ ಎಂಬುದನ್ನು ಗಾಂಧೀಜಿ ನಮಗೆ ತೋರಿಸಿಕೊಟ್ಟಿದ್ದಾರೆ. ರಾಜ್ಯದಾಧ್ಯಂತ ಯಂಗ್ ಬ್ರಿಗೇಡ್ ಸಂಘಟನೆ ನಡೆಯುತ್ತಿದೆ. ತಾಲೂಕು ಮಟ್ಟದ ಸಂಘಟನೆಗೆ ಪುತ್ತೂರಿನಲ್ಲಿ ಚಾಲನೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಯಲ್ಲಿ ಯಂಗ್ ಬ್ರಿಗೇಡ್ ಸಂಘಟನೆಯ ಧ್ವಜ ಹಾರಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ದ.ಕ.ಜಿಲ್ಲಾ ಸೇವಾದಳದ ಮುಖ್ಯ ಸಂಘಟಕ ಹಾಜಿ ಎಚ್.ಎಂ. ಅಶ್ರಫ್ ತಸ್ವೀದ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಪುತ್ತೂರು ಬಸ್ಸು ನಿಲ್ದಾಣದ ಬಳಿಯಲ್ಲಿನ ಗಾಂಧಿಕಟ್ಟೆಯಿಂದ ಮುಖ್ಯರಸ್ತೆಯಲ್ಲಿ ಟೌನ್ ಬ್ಯಾಂಕ್ ವಠಾರದ ತನಕ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಜಾಥಾಕ್ಕೆ ಯಂಗ್ ಬ್ರಿಗೇಡ್ ವಿಟ್ಲ- ಉಪ್ಪಿನಂಗಡಿ ಅಧ್ಯಕ್ಷ ಅಭಿಷೇಕ್ ಬಿ ಚಾಲನೆ ನೀಡಿದರು.
ಯಂಗ್ ಬ್ರಿಗೇಡ್ ಪುತ್ತೂರು ಅಧ್ಯಕ್ಷ ರಂಜಿತ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಯಂಗ್ ಬ್ರಿಗೇಡ್ ವಿಟ್ಲ-ಉಪ್ಪಿನಂಗಡಿ ಅಧ್ಯಕ್ಷ ಅಭಿಷೇಕ್ ಬಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಯಂಗ್ ಬ್ರಿಗೇಡ್ ಸದಸ್ಯ ಬಾಲಕೃಷ್ಣ ಗೌಡ ವಂದಿಸಿದರು. ರಝಾಕ್ ಕಾರ್ಯಕ್ರಮ ನಿರೂಪಿಸಿದರು.