ಹಾನಗಲ್ ಉಪಚುನಾವಣೆ ವೀಕ್ಷಕರಾಗಿ ಕಾಂಗ್ರೆಸ್ ಮುಖಂಡ ಟಿ. ಎಂ. ಶಹೀದ್ ತೆಕ್ಕಿಲ್ ನೇಮಕ…

ಸುಳ್ಯ: ಹಾವೇರಿ ಜಿಲ್ಲೆ ಹಾನಗಲ್ ವಿಧಾನ ಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರವಾಗಿ ಕೆಪಿಸಿಸಿಯ ವೀಕ್ಷಕರಾಗಿ ಕಾಂಗ್ರೇಸ್ ಮುಖಂಡ ಟಿ. ಎಂ. ಶಹೀದ್ ತೆಕ್ಕಿಲ್ ರವರನ್ನು ಕೆಪಿಸಿಸಿಯ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ನೇಮಕಗೊಳಿಸಿರುತ್ತಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹಮದ್ ತಿಳಿಸಿರುತ್ತಾರೆ.
ಟಿ. ಎಂ. ಶಹೀದ್ ತೆಕ್ಕಿಲ್ NSUI ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಯುವ ಕಾಂಗ್ರೇಸ್ ನ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಕಾರ್ಯದರ್ಶಿಯಾಗಿ ಹಾಗೂ ಹಾವೇರಿ ಜಿಲ್ಲೆಯ ಹಿರೆಕ್ಕೆರೂರು ವಿಧಾನ ಸಭಾ ಕ್ಷೇತ್ರ ಮತ್ತು ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕೆಪಿಸಿಸಿಯ ಉಸ್ತುವಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ.
ಟಿ. ಎಂ. ಶಹೀದ್ ರವರು ಎರಡು ಬಾರಿ ಸುಳ್ಯ ಕೆವಿಜಿ ಕಾನೂನು ಕಾಲೇಜಿನ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸೆನೆಟ್ ಆಯ್ಕೆ ಸಮಿತಿ ಸದಸ್ಯರಾಗಿ, ಕೆವಿಜಿ ಕಾನೂನು ಕಾಲೇಜಿನ ವಿದ್ಯಾರ್ಥಿ ಯೂನಿಯನ್ ನ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ವಿಶ್ವವಿದ್ಯಾನಿಲಯ ಸರ್ವ ಕಾಲೇಜು ವಿದ್ಯಾರ್ಥಿ ಯೂನಿಯನ್ ನ ಉಪಾಧ್ಯಕ್ಷರಾಗಿ, ರಾಜೀವ್ ಗಾಂಧಿ ಯುವ ಶಕ್ತಿ ಮತ್ತು ಗ್ರಾಮೀಣಾಭಿವೃದ್ಧಿ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
ಸುಳ್ಯ ತಾಲೂಕು ಅಲ್ಪ ಸಂಖ್ಯಾತರ ವಿವಿದ್ದೋದೇಶ ಸಹಕಾರಿ ಸಂಘದಲ್ಲಿ 7 ವರ್ಷಗಳ ಕಾಲ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ನ ಸದಸ್ಯರಾಗಿ, ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ಅರಣ್ಯ ನಿಗಮದ ನಿರ್ದೇಶಕರಾಗಿ, ಎರಡು ಬಾರಿ ಕೇಂದ್ರ ನಾರು ಮಂಡಳಿ ಸದಸ್ಯರಾಗಿ, ಪ್ರಸ್ತುತ ಕರ್ನಾಟಕ ರಾಜ್ಯದ ರಾಜೀವ್ ಯೂತ್ ಫೌಂಡೇಶನ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಸಂಸ್ಥೆಯ ಅಧ್ಯಕ್ಷರಾಗಿ 3 ದಶಕಗಳಿಂದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಹಕಾರಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಇವರು ಗ್ರಾಮ ಮಟ್ಟದಿಂದ ತೊಡಗಿ ರಾಷ್ಟ್ರ ರಾಜಧಾನಿಯವರೆಗೆ ಸೇವಾವಲಯವನ್ನು ವಿಸ್ತರಿಸಿಕೊಂಡವರಾಗಿದ್ದಾರೆ. ರಾಜ್ಯ ಮಟ್ಟದ 49 ಜನ ವೀಕ್ಷಕರಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಹೀದ್ ತೆಕ್ಕಿಲ್ ಒಬ್ಬರಾಗಿರುತ್ತಾರೆ.