ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಮತ್ತು ಮೇದಿನಿ ಟೆಕ್ನಾಲಜೀಸ್ ನಡುವೆ ತಿಳುವಳಿಕೆ ಒಪ್ಪಂದ…
ಪುತ್ತೂರು: ಇಂಜಿನಿಯರಿಂಗ್ ಕೋರ್ಸನ್ನು ಮುಗಿಸಿ ಹೊರಬರುವ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಮತ್ತು ಉದ್ಯಮಕ್ಕೆ ಸಿದ್ದರಾಗುವಂತೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯೊಂದಿಗೆ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮತ್ತು ಬೆಂಗಳೂರಿನ ಮೇದಿನಿ ಟೆಕ್ನಾಲಜೀಸ್ ಇದರ ನಡುವೆ ನಿರ್ಮಾಣ, ವಾಸ್ತುಶಿಲ್ಪ ವೃತ್ತಿಪರತೆ, ಕೌಶಲ ಅಭಿವೃದ್ಧಿಯ ಪ್ರಾಯೋಗಿಕ ತರಬೇತಿ, ಇಂಟರ್ನ್‍ಶಿಪ್, ಪ್ರಾಜೆಕ್ಟ್ ವರ್ಕ್ ಮತ್ತು ಕ್ಯಾಂಪಸ್ ನೇಮಕಾತಿ ಮುಂತಾದ ವಿಷಯಗಳಲ್ಲಿ ಸಹಭಾಗಿತ್ವವನ್ನು ನೀಡುವ ಬಗ್ಗೆ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಲಾಯಿತು.
ಸುಧಾರಿತ ತಾಂತ್ರಿಕ ಕೌಶಲಗಳ ತರಬೇತಿ, ವಿನ್ಯಾಸ ತಂತ್ರಜ್ಞಾನದಲ್ಲಿ ಪರಿಣತಿಯನ್ನು ಪಡೆಯುವುದಕ್ಕಾಗಿ ಬೇಕಾದ ತರಬೇತಿಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಪಠ್ಯಕ್ರಮಕ್ಕೆ ಅನುಗುಣವಾಗಿ 4 ವಾರಗಳ ಇಂಟರ್ನ್‍ಶಿಪ್ ತರಬೇತಿ, ಸಿವಿಲ್ ಮತ್ತು ಮೆಕ್ಯಾನಿಕಲ್ ವಿಭಾಗಕ್ಕೆ ಸಂಬಂಧಿಸಿದಂತೆ ನೂತನ ಸಾಫ್ಟ್‍ವೇರ್ ಗಳ ತರಬೇತಿ ಮತ್ತು ಬಳಕೆಯ ಬಗ್ಗೆ ನುರಿತ ತರಬೇತುದಾರರಿಂದ ತರಗತಿಗಳು, ಪ್ರಾಜೆಕ್ಟ್‍ವರ್ಕ್‍ಗೆ ಬೇಕಾದ ಸಲಹೆ, ಸಹಕಾರಗಳು ಈ ಒಪ್ಪಂದದಲ್ಲಿ ಸೇರಿಕೊಂಡಿವೆ.
ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ, ಮತ್ತು ಮೇದಿನಿ ಟೆಕ್ನಾಲಜೀಸ್‍ನ ಕಾರ್ಯನಿರ್ವಾಹಕ ನಿರ್ದೇಶಕ ಪ್ರದೀಪ್ ಕಬ್ಬೂರ್ ಈ ಒಪ್ಪಂದಕ್ಕೆ ಸಹಿ ಹಾಕಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಆನಂದ್.ವಿ.ಆರ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.