ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ – ಪದವಿ ಪ್ರದಾನ ಸಮಾರಂಭ…
ಮೂಡುಬಿದ್ರಿ: ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2021 – 22 ನೇ ಶೈಕ್ಷಣಿಕ ವರ್ಷದಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಅ. 29 ರಂದು ನಡೆಯಿತು.
ನಿವಿಯಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಸುಯೋಗ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಾವು ಕಲಿತ ವಿದ್ಯಾಸಂಸ್ಥೆಗೆ ಯಾವ ವಿಧದಲ್ಲಾದರೂ ಕೊಡುಗೆ ನೀಡುವಲ್ಲಿ ಯೋಚಿಸಬೇಕು. ಮಾತ್ರವಲ್ಲದೆ ಸಮಾಜಕ್ಕೆ ಕೂಡ ವಿಶೇಷವಾದ ಕೊಡುಗೆ ನೀಡಬೇಕು.ಇಂಜಿನಿಯರಿಂಗ್ ಪದವೀಧರರು ಸಮಾಜ ನಿರ್ಮಾಣ ಕಾರ್ಯದಲ್ಲಿ ಮಹತ್ತರ ಜವಾಬ್ದಾರಿ ಹೊಂದಬೇಕು. ಒಳ್ಳೆಯ ಯೋಚನೆ, ಕಲ್ಪನೆ ಇದ್ದರೆ ಅವಕಾಶಗಳು ತನ್ನಿಂತಾನೇ ದೊರೆಯುತ್ತದೆ ಎಂದರು.
ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಗಂಗಾಧರ ಸೋಮಯಾಜಿ ಕೆ ಎಸ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಕಲಿಕೆಯು ನಿರಂತರ ಪ್ರಕ್ರಿಯೆ. ಹೊಸ ಹೊಸ ವಿಷಯಗಳನ್ನು ಕಲಿತು ಅವಕಾಶಗಳನ್ನು ಅನ್ವೇಷಿಸಬೇಕು. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ತಾಂತ್ರಿಕ ಜ್ಞಾನವನ್ನು ಉಪಯೋಗಿಸಬೇಕು ಎಂದ ಅವರು ಪದವೀಧರರ ಯಶಸ್ಸಿಗಾಗಿ ಶುಭ ಹಾರೈಸಿದರು.
ಯೆನೆಪೋಯ ಗ್ರೂಪ್ ನ ಕಾರ್ಯಾಚರಣೆಗಳ ನಿರ್ದೇಶಕರಾದ ಯೆನೆಪೋಯ ಅಬ್ದುಲ್ಲಾ ಜಾವೇದ್, ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್ ನ ಕಾರ್ಯದರ್ಶಿ,ಯೆನೆಪೋಯ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಅಖ್ತರ್ ಹುಸೇನ್, ಎಲ್ಲ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಜಿ. ಡಿಸೋಜ ಸ್ವಾಗತಿಸಿದರು ಮತ್ತು ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರೊ. ಸ್ಮಿತಾ ಅತಿಥಿಗಳ ಪರಿಚಯ ಮಾಡಿದರು. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಪ್ರಸನ್ನ ಕುಮಾರ್ ವಂದಿಸಿದರು. ಪ್ರೊ. ನಾಝಿಯಾ ಕಾರ್ಯಕ್ರಮ ನಿರೂಪಿಸಿದರು. ವಿವಿಧ ವಿಭಾಗಗಳ ಸುಮಾರು 250 ಕ್ಕೂ ಅಧಿಕ ಮಂದಿ ಪದವಿಯ ಪ್ರಮಾಣಪತ್ರವನ್ನು ಸ್ವೀಕರಿಸಿದರು.
ಯೆನೆಪೋಯ ( ಪರಿಗಣಿತ ವಿಶ್ವವಿದ್ಯಾನಿಲಯ) ಖರೀದಿ ವಿಭಾಗದ ನಿರ್ದೇಶಕ ಯೆನೆಪೋಯ ಮೊಯಿದೀನ್ ಖುರ್ಷಿದ್, ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್, ಕಾಲೇಜಿನ ಶೈಕ್ಷಣಿಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.