ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಮಂಗಳೂರು ವಿಭಾಗದ ಪುರುಷರ ವಾಲಿಬಾಲ್ ಪಂದ್ಯಾಟ…
ಪುತ್ತೂರು: ವ್ಯಕ್ತಿಯೊಬ್ಬ ಯಾವುದೇ ವಿಷಯದಲ್ಲಿ ಪರಿಪೂರ್ಣನಾಗಬೇಕಾದರೆ ನಿರಂತರ ಅಭ್ಯಾಸ ಅಗತ್ಯ. ಏಕಾಗ್ರತೆಯಿಂದ ಕೂಡಿದ ಪ್ರಯತ್ನದಿಂದ ಮಾತ್ರ ಯಶಸ್ಸು ಸಿದ್ದಿಸುತ್ತದೆ ಎಂದು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್.ವಿ.ಎಸ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ ಮಂಗಳೂರು ವಿಭಾಗದ ಪುರುಷರ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧೆಯಲ್ಲ್ಲಿ ಎಲ್ಲರೂ ಗೆಲ್ಲುವುದು ಸಾಧ್ಯವಿಲ್ಲ ಹಾಗಾಗಿ ಆಟವನ್ನು ಕ್ರೀಡಾಸ್ಪೂರ್ತಿಯಿಂದ ಆಡಬೇಕು ಮತ್ತು ಅಲ್ಲಿನ ಕಹಿ ಘಟನೆಗಳನ್ನು ಕ್ರೀಡಾಂಗಣದಿಂದ ಹೊರ ಹೋಗುವಾಗ ಮರೆತುಬಿಡಬೇಕು ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ ಹವ್ಯಾಸಗಳು ನಮ್ಮ ಮಾನಸಿಕ ಒತ್ತಡವನ್ನು ಕಡಿಮೆಮಾಡುತ್ತವೆ. ದೈನಂದಿನ ಜಂಜಾಟಗಳಿಂದ ಹೊರ ಬರಲು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಇದು ಶಾರೀರಿಕ ದೃಡತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕ ಪ್ರೋತ್ಸಾಹವನ್ನು ನೀಡುವ ಕೆಲಸವನ್ನು ನಮ್ಮ ಸಂಸ್ಥೆಯು ನಿರಂತರವಾಗಿ ಮಾಡುತ್ತಿದೆ ಎಂದು ನುಡಿದರು
ಮಂಗಳೂರು ವಿಭಾಗದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ 18 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿವೆ.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಸ್ವಾಗತಿಸಿ, ಎಂಸಿಎ ವಿಭಾಗದ ನಿರ್ದೇಶಕಿ ಡಾ.ವಂದನಾ.ಬಿ.ಎಸ್ ವಂದಿಸಿದರು. ಭಾವನಾ.ಎಂ.ಆರ್ ಕಾರ್ಯಕ್ರಮ ನಿರ್ವಹಿಸಿದರು.