ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು- ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿ- ವಿಚಾರ ಸಂಕಿರಣ…

ಪುತ್ತೂರು: ನಮ್ಮ ಮನೆಯ ಮಸಾಲೆಯ ಡಬ್ಬವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಅನೇಕ ರೋಗಗಳಿಗೆ ಕಡಿವಾಣ ಹಾಕಬಹುದು ಅಂತೆಯೇ ನಮ್ಮ ತಾಂತ್ರಿಕ ಸಂಸ್ಥೆಯಲ್ಲಿರುವ ಆಂತರಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಸಂಸ್ಥೆಯ ಬಳಕೆಗೆ ಬೇಕಾದ ತಂತ್ರಜ್ಞಾನವನ್ನು ನಾವೇ ಅಭಿವೃದ್ಧಿ ಪಡಿಸಬಹುದು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಂಯುಕ್ತ ಆಶ್ರಯದಲ್ಲಿ ಇಂಜಿನಿಯರಿಂಗ್ ಕಾಲೇಜಿನ ಎಂ.ಸಿ.ಎ ವಿಭಾಗದ ಸಭಾಂಗಣದಲ್ಲಿ ನಡೆದ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಗೆ ಬೇಕಾಗುವ ಮೂಲಭೂತ ಅಂಶಗಳು ಎನ್ನುವ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತಾಡಿದರು.
ಪ್ರಸ್ತುತ ಪಠ್ಯಕ್ರಮಕ್ಕೆ ಪೂರಕವಾಗುವ ರೀತಿಯಲ್ಲಿ ಈ ತರಬೇತಿಗಳು ನಡೆಯುತ್ತಿದ್ದು, ಪದವಿ ಮುಗಿಯುವಾಗ ನಿಮಗೆ ಇದೊಂದು ಪೂರಕ ಅಂಶವಾಗಿ ಪರಿಗಣನೆಯಾಗುತ್ತದೆ ಅಲ್ಲದೆ ಸಂಸ್ಥೆಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ, ಜತೆಗೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್.ಪಿ ಮಾತನಾಡಿ ಸಂಶೋಧನೆ ಪ್ರತಿಯೊಬ್ಬ ಮಾನವನ ಜೀವನ ಭಾಗವಾಗಿದೆ. ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಅಭಿವೃದ್ದಿಯಾಗುತ್ತಲೇ ಇವೆ. ಅದನ್ನು ಅಳವಡಿಸಿಕೊಂಡು ಹೋಗುವ ಅನಿವಾರ್ಯತೆ ನಮಗಿದೆ. ಮೊಬೈಲ್ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಅದರ ಬಳಕೆ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಅವರದ್ದೇ ಆದ ಕಲ್ಪನೆಗಳಿವೆ. ಅದರ ಸಾಕಾರಕ್ಕೆ ಅವರಿಗೆ ಪೂರಕ ಮಾಹಿತಿಯನ್ನು ನೀಡುವ ಕಾರ್ಯಗಳು ಇಲ್ಲಿ ನಡೆಯುತ್ತಿವೆ ಎಂದರು.
ಎಲ್‍ಟಿಐ ಮೈಂಡ್‍ಟ್ರೀ ಸಂಸ್ಥೆಯ ನಿರ್ದೇಶಕ ಕೃಷ್ಣಮೂರ್ತಿ, ದ ವೆಬ್ ಪೀಪಲ್ ಸಂಸ್ಥೆಯ ಸ್ಥಾಪಕ ನಿರ್ದೇಶಕ ಶರತ್ ಶ್ರೀನಿವಾಸ್ ಹಾಗೂ ಇನ್ಫೋಸಿಸ್ ಸಂಸ್ಥೆಯ ಗ್ರೂಪ್ ಪ್ರಾಜೆಕ್ಟ್ ಮ್ಯಾನೇಜರ್ ಸುಹಾಸ್ ಸಂಪನ್ಮೂಲ ವ್ಯಕ್ತಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಾಗಾರವನ್ನು ನಡೆಸಿಕೊಟ್ಟರು.
ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ವಿವೇಕಾನಂದ ಪದವಿ ಕಾಲೇಜು ಮತ್ತು ವಿವೇಕಾನಂದ ಪಾಲಿಟೆಕ್ನಿಕ್‍ನ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡರು.
ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮೇಖಲಾ ರಾವ್ ವಂದಿಸಿದರು. ಚೈತ್ರಾ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Back to top button