ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ವಾರ್ಷಿಕ ಕ್ರೀಡಾಕೂಟ…

ಪುತ್ತೂರು: ಗುರಿಯನ್ನು ನಿರ್ಧರಿಸಿ ಕಾರ್ಯಯೋಜನೆಯನ್ನು ತಯಾರಿಸಿದ ಮೇಲೆ ಪ್ರತಿದಿನ ನಿಷ್ಠೆಯಿಂದ ಶ್ರಮವಹಿಸಿ ಅಭ್ಯಾಸ ಮಾಡಿದರೆ ನಮ್ಮ ನಾಳೆಗಳು ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ ಎಂದು ಪುತ್ತೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಶ್ರೀಕಾಂತ್ ಪೂಜಾರಿ ಬಿರಾವ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತಾಡಿದರು. ಆಧುನಿಕ ಯುಗದಲ್ಲಿ ಎಲ್ಲರೂ ತ್ವರಿತ ಗತಿಯ ಫಲಿತಾಂಶವನ್ನೇ ಬಯಸುತ್ತಾರೆ ಆದರೆ ಅಭ್ಯಾಸವಿಲ್ಲದ ಸಾಧನೆಗಳು ಕ್ಷಣಿಕ ಫಲಿತಾಂಶವನ್ನು ನೀಡಬಲ್ಲದೇ ಹೊರತು ಭವಿಷ್ಯಕ್ಕೆ ಸಹಕಾರಿಯಾಗಲಾರದು ಎಂದು ನುಡಿದರು.
ಇನ್ನೋರ್ವ ಮುಖ್ಯ ಅತಿಥಿ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಕೆ ಧ್ವಜಾರೋಹಣವನ್ನು ಮಾಡಿ ಮಾತನಾಡಿ ಜೀವನದಲ್ಲಿ ಎಡರು ತೊಡರುಗಳು, ಜಯ ಅಪಜಯಗಳು ಸಾಮಾನ್ಯ ಅದನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅದನ್ನು ಸ್ವೀಕರಿಸುವ ಮತ್ತು ಅದರಿಂದ ಪಾಠ ಕಲಿಯುವ ಸಾಧ್ಯತೆ ಮಾತ್ರ ನಮಗಿದೆ ಎಂದು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ ಕೆ ಎಲ್ಲರಲ್ಲಿಯೂ ಒಂದೊಂದು ಪ್ರತಿಭೆಗಳು ಅಡಕವಾಗಿರುತ್ತವೆ ಅದನ್ನು ಗುರುತಿಸಿ ಬೆಳೆಸಿಕೊಳ್ಳಬೇಕು, ಸಾಕಷ್ಟು ಪ್ರಯತ್ನಗಳಿಂದ ಪರಿಪೂರ್ಣರಾಗಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವಾಸ್ ಶೆಣೈ ಮಾತನಾಡಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪಾಠ ಹಾಗೂ ಪಠ್ಯೇತರ ವಿಷಯಗಳಿಗೆ ಸಮಾನ ಅವಕಾಶವನ್ನು ನೀಡುತ್ತಿದೆ. ಇದರ ಪ್ರಯೋಜನವನ್ನು ಪಡೆದು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಚಾಂಪಿಯನ್ನರಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳು ಹಾಗೂ ತರಬೇತುದಾರರು ಅಭಿನಂದನಾರ್ಹರು ಎಂದು ನುಡಿದರು.
ಭಾರತೀಯ ವಾಯುಪಡೆಯ ವಿಶ್ರಾಂತ ಅತ್ಲೆಟಿಕ್ ತರಬೇತುದಾರ ರವಿಶಂಕರ್ ಮುಕುಂದ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿದರು. ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಸತ್ಯನಾರಾಯಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಬಾಲಚಂದ್ರ ಗೌಡ ಭಾರ್ತಿಕುಮೇರು ಸ್ವಾಗತಿಸಿ, ಪ್ರೊ.ಅಜಿತ್.ಕೆ ವಂದಿಸಿದರು. ಪ್ರೊ.ಶ್ರೀಶರಣ್ಯ ಕಾರ್ಯಕ್ರಮ ನಿರ್ವಹಿಸಿದರು.


