ಕಾಸರಗೋಡು ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ – ಕುಂಟಾರು ರವೀಶ ತಂತ್ರಿ ರಾಜೀನಾಮೆ….
ಕಾಸರಗೋಡು: ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತದ ಕಾರಣದಿಂದ ರಾಜ್ಯ ಸಮಿತಿ ಸದಸ್ಯ ಕುಂಟಾರು ರವೀಶ ತಂತ್ರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕೆ.ಶ್ರೀಕಾಂತ್ ಅವರನ್ನು ಎರಡನೇ ಬಾರೀ ಆಯ್ಕೆ ಮಾಡಿದ ಬೆನ್ನಿಗೆ ರವೀಶ್ ತಂತ್ರಿ ಅಸಮಾಧಾನಗೊಂಡಿದ್ದು, ರಾಜ್ಯ ಸಮಿತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ರಾಜೀನಾಮೆ ಪತ್ರವನ್ನು ಪಕ್ಷದ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.
1994 ರಿಂದ 2016ರವರೆಗೆ ಸಮಘ ಪರಿವಾರದ ವಿವಿಧ ಸಂಘಟನೆಗಳಲ್ಲಿ ಕೆಲಸ ಮಾಡಿರುವ ತಂತ್ರಿಗಳು ಬಳಿಕ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು. ಪಕ್ಷ ಇನ್ನಷ್ಟು ಬೆಳೆಯಬೇಕು ಎಂದು ತಿಳಿಸಿರುವ ಅವರು ಹಿಂದಿನಂತೆ ಸಂಘ ಪರಿವಾರದಲ್ಲೂ ಧಾರ್ಮಿಕ ರಂಗದಲ್ಲೂ ಮುಂದುವರೆಯುವುದಾಗಿ ಹೇಳಿದ್ದಾರೆ.
ಕೆ.ಸುರೇಂದ್ರನ್ ಅವರು 2016ರಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ 89 ಮತಗಳಿಂದ ಸೋಲುಕಂಡಿದ್ದು, ಅವರಿಗೆ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಟಿಕೆಟ್ ಕೊಡದೇ ರವೀಶ ತಂತ್ರಿ ಅವರನ್ನು ಕಣಕ್ಕಿಳಿಸಲಾಗಿತ್ತು. ಪಕ್ಷದೊಳಗಿನ ಗುಂಪುಗಾರಿಕೆಯ ಕಾರಣದಿಂದಾಗಿ ರವೀಶ ತಂತ್ರಿ ಅವರು ಟಿಕೆಟ್ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದರು ಎಂಬ ಮಾತುಗಳು ಕೇಳಿ ಬಂದಿತ್ತು. ಈಗ ಕೆ. ಸುರೇಂದ್ರನ್ ಅವರು ರಾಜ್ಯಾಧ್ಯಕ್ಷರಾಗುವ ಮುಖಾಂತರ ಮತ್ತೊಂದು ಬಣ ಹಿಡಿತ ಸಾಧಿಸಲು ಹೊರಟಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.