ಪ್ರಕೃತಿ ಉಪಾಸನೆಯೇ ರಾಜರಾಜೇಶ್ವರಿಯ ಆರಾಧನೆ: ರಾಘವೇಶ್ವರ ಶ್ರೀ…

ಮಂಗಳೂರು: ಇಡೀ ನಮ್ಮ ಬದುಕು ಪ್ರಕೃತಿಯ ದಯೆ. ಪಂಚಭೂತಗಳೆಲ್ಲವೂ ಪ್ರಕೃತಿ. ನಿಂತ ನೆಲ, ಕುಡಿಯುವ ಜಲ, ಅಗ್ನಿ, ವಾಯು, ಆಕಾಶ ಎಲ್ಲವೂ ಆಕೆಯ ಕರುಣೆ. ಈ ಪ್ರಕೃತಿಯನ್ನು ಆರಾಧಿಸುವುದೇ ನವರಾತ್ರಿ ಉಪಾಸನೆಯ ವಿಶೇಷ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀಮಹಾ ಸ್ವಾಮೀಜಿ ನುಡಿದರು.
ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನವರಾತ್ರ ನಮಸ್ಯಾ ಅಂಗವಾಗಿ ‘ಶ್ರೀ ಲಲಿತೋಪಾಖ್ಯಾನ’ ಪ್ರವಚನ ಮಾಲಿಕೆಯ ಎರಡನೇ ದಿನದ ಪ್ರವಚನವನ್ನು ಶ್ರೀಗಳು ಅನುಗ್ರಹಿಸಿದರು.
ರಾಜರಾಜೇಶ್ವರಿ ತ್ರಿಪುರಸುಂದರಿಯ ಮೊದಲ ರೂಪ ಪ್ರಕೃತಿ. ಬ್ರಹ್ಮ ಧ್ಯಾನ ಮಾಡಿದಾಗ ಪರಾಶಕ್ತಿ ಬೆಟ್ಟವಾಗಿ ಬ್ರಹ್ಮನಿಂದ ಒಡಮೂಡಿತು. ಸಕಲ ಜೀವರಾಶಿಗಳ ಮಾತೆಯಾದ ಶಕ್ತಿಸ್ವರೂಪಿಣಿ ವಿಶ್ವದ ಸೃಷ್ಟಿಕರ್ತೆಯಾಗಿ, ಪ್ರಕೃತಿಯಾಗಿ ಆವೀರ್ಭವಿಸಿದಳು. ಪಂಚೇಂದ್ರಿಯಗಳು ಕೂಡಾ ಪ್ರಕೃತಿಯೇ. ನಮ್ಮ ಅನುಭವಕ್ಕೆ ಬರುವುದೆಲ್ಲವೂ ಪ್ರಕೃತಿ. ದೇವಿಯ ಮಡಿಲಲ್ಲೇ ನಾವೆಲ್ಲ ಇದ್ದೇವೆ ಎಂದು ವಿಶ್ಲೇಷಿಸಿದರು.
ತ್ರಿಪುರಸುಂದರಿ ಕರುಣಿಸಿದ ವಿಶೇಷ ವರಸ್ವರೂಪವಾದ ಪುಷ್ಪಮಾಲಿಕೆಯನ್ನು ಉಪೇಕ್ಷಿಸಿದ ಇಂದ್ರನಿಗೆ ದೂರ್ವಾಸರು ಶಾಪದ ಪರಿಣಾಮವಾಗಿ ಇಂದ್ರ ತೇಜೋಹೀನನಾಗುತ್ತಾನೆ. ಪುಣ್ಯ ಗರ್ವವಾಗಿ ಮಾರ್ಪಟ್ಟಾಗ ಅದು ಕೂಡಾ ಪಾಪವಾಗಿ ಪರಿಣಾಮವಾಗುತ್ತದೆ ಎನ್ನುವುದಕ್ಕೆ ಇದು ನಿದರ್ಶನ ಎಂದರು.
ಮಹಾವಿಷ್ಣು ಸಮುದ್ರ ಮಥನದ ಬಳಿಕ ದೇವತೆಗಳಿಗೆ ಅಮೃತವನ್ನು ಕರುಣಿಸಲು ರಾಜರಾಜೇಶ್ವರಿಯನ್ನು ನೆನೆದು ಕೊನೆಗೆ ಆಕೆಯಲ್ಲೇ ಲೀನನಾಗಿ ಮೋಹಿನಿಯ ರೂಪವನ್ನು ತಾಳಿ ರಾಕ್ಷಸರ ಸಂಹಾರಕ್ಕೆ ಕಾರಣನಾಗುತ್ತಾನೆ. ರಾಜರಾಜೇಶ್ವರಿ ತ್ರಿಪುರಸುಂದರಿಯ ಹೃದಯ ಅತ್ಯಂಕ ಕೋಮಲ. ಆಕೆಯ ಧ್ಯಾನ ಮಾತ್ರದಿಂದ ಸತ್ಫಲಗಳು ಪ್ರಾಪ್ತಿಯಾಗುತ್ತವೆ. ನಾವು ಮಾಡಿದ ಪಾಪಗಳೆಲ್ಲ ಪುಣ್ಯಮಯವಾಗಿ ಪರಿವರ್ತನೆಯಾಗುವ ಮಾರ್ಗ ರಾಜರಾಜೇಶ್ವರಿಯ ಉಪಾಸನೆ ಮಾತ್ರ ಎಂದು ಹೇಳಿದರು.
ಸರಿಯಾಗಿ ಆಕೆಯ ಆರಾಧನೆ ನಡೆದರೆ, ಆಕೆಯ ಕರುಣೆ ಮಳೆಯಾಗಿ ಭಕ್ತರತ್ತ ಹರಿಯುತ್ತದೆ. ದೇವಿಯ ಉಪಾಸನೆಯಲ್ಲಿ ಶ್ರದ್ಧೆ- ಭಕ್ತಿ ಮುಖ್ಯ. ಅವುಗಳಿದ್ದರೆ, ವಿಧಿಯುಕ್ತವಾಗಿ ಮಾಡಲು ಸಾಧ್ಯವಾಗದೇ ವಿಧಿಹೀನವಾಗಿ ಮಾಡಿದರೂ ಆಕೆಗೆ ಸಲ್ಲುತ್ತದೆ. ಇಹ- ಪರದ ಸುಖವನ್ನು ಆಕೆ ಅನುಗ್ರಹಿಸುತ್ತಾಳೆ. ಪುಣ್ಯ ಸಂಪಾದನೆ ಮಾಡಿಕೊಳ್ಳುವ ಸುಲಭ ಮಾರ್ಗ ತ್ರಿಪುರಸುಂದರಿಯ ಆರಾಧನೆ ಎಂದರು.
ಒಳ್ಳೆಯ ವಿಷಯಗಳ ಮೇಲೆ ಜಿಜ್ಞಾಸೆ ಅಗತ್ಯ. ಭಗವಂತ ಮುನಿಗಳ ಜತೆ ಮುನಿಯಾಗಿ, ಒಳ್ಳೆಯವರ ಜತೆ ಒಳ್ಳೆಯವರಾಗಿ ಹೇಗೆ ಅನುಗ್ರಹಿಸುತ್ತಾನೆ ಎನ್ನುವುದಕ್ಕೆ ಲಲಿತೋಪಾಖ್ಯಾನವನ್ನು ಹಯಗ್ರೀವ ಮುನಿಯ ರೂಪ ಪಡೆದು ಅಗಸ್ತ್ಯರಿಗೆ ಅನುಗ್ರಹಿಸುತ್ತಾರೆ. ಬಗೆಬಗೆಯಲ್ಲಿ ಜೀವರಾಶಿಗಳ ಮೇಲೆ ಕರುಣೆ ತೋರುವ ಪರಿಯನ್ನು ಬಣ್ಣಿಸಿದ್ದಾಗಿ ವಿವರಿಸಿದರು.
ಚಿನ್ಮಯ ಮತ್ತು ಅನುಗ್ರಹ ಮುದ್ರೆಯನ್ನು ಹೊಂದಿದ ರಾಮ ಭೋಗ, ಮೋಕ್ಷವನ್ನು ನೀಡುವಂತೆ ರಾಜರಾಜೇಶ್ವರಿಯ ಉಪಾಸನೆ ಇದೇ ಫಲವನ್ನು ನೀಡುವಂಥದ್ದು ಎಂದು ಹಯಗ್ರೀವ ಶ್ರೀವಿದ್ಯೆ ಎಂಬ ಮಂತ್ರವನ್ನು ಅಗಸ್ತ್ಯರಿಗೆ ಅನುಗ್ರಹಿಸುತ್ತಾರೆ. ಶ್ರೀವಿದ್ಯೆಯ ಉಪಾಸನೆ ಮಾಡುವವರೆಲ್ಲರೂ ಕಷ್ಟಕೋಟಲೆಗಳಿಂದ ಮುಕ್ತರಾಗುತ್ತಾರೆ ಎನ್ನುವುದನ್ನು ಅಗಸ್ತ್ಯರಿಗೆ ವಿವರಿಸಿದ್ದಾರೆ ಎಂದರು.
ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಮಾಣಿಮಠ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್, ಪುತ್ತೂರಿನ ಸ್ವರ್ಣೋದ್ಯಮಿ ಬಲರಾಂ ಆಚಾರ್ಯ ದಂಪತಿ, ಹವ್ಯಕ ಮಹಾಮಂಡಲ ಗೌರವ ಕಾರ್ಯದರ್ಶಿ ಪೆದಮಲೆ ನಾಗರಾಜ ಭಟ್, ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ಯುವ ಪ್ರಧಾನ ಕೇಶವ ಪ್ರಕಾಶ್ ಮುಣ್ಚಿಕಾನ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ್ ಕುದುಪುಲ, ಮುಳ್ಳೇರಿಯಾ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಮಂಗಳೂರು ಮಂಡಲ ಉಪಾಧ್ಯಕ್ಷ ರಾಜಶೇಖರ ಕಾಕುಂಜೆ, ಉಂಡೆಮನೆ ವಿಶ್ವೇಶ್ವರ ಭಟ್, ಶ್ರೀಶಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

whatsapp image 2023 10 16 at 7.13.44 pm (1)
Sponsors

Related Articles

Back to top button