ಬಹುನಿರೀಕ್ಷಿತ ನೆಹರು ನಗರ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ…
ಪುತ್ತೂರು: ಕೇಂದ್ರ ಸರ್ಕಾರವು ಕಳೆದ ಹತ್ತು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ 52 ಸಾವಿರ ಕೋಟಿಗಳಷ್ಟು ಅನುದಾನವನ್ನು ನೀಡಿದೆ. ಜಿಲ್ಲೆಯ ಹಲವೆಡೆ ಕಾಮಗಾರಿಗಳು ಚುರುಕಿನಿಂದ ಸಾಗಿವೆ ಮತ್ತು ಕೆಲವೊಂದು ಕೆಲಸಗಳು ಸಂಪನ್ನಗೊಂಡಿವೆ ಎಂದು ಮಂಗಳೂರು ಕ್ಷೇತ್ರದ ಸಂಸದ ನಳಿನ್‍ಕುಮಾರ್ ಕಟೀಲ್ ಹೇಳಿದರು.
ಅವರು ಪುತ್ತೂರಿನ ನೆಹರುನಗರದ ರೈಲ್ವೇ ಮೇಲ್ಸೇತುವೆ ಕಾಮಗಾರಿಯ ಆರಂಭಕ್ಕೆ ಶಿಲಾನ್ಯಾಸ ಮಾಡಿ, ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತಾಡಿದರು.
ಇಂದು ದಕ್ಷಿಣ ಕನ್ನಡ ಜಿಲ್ಲೆಯು ವಿವಿಧ ಕ್ಷೇತ್ರಗಳಲ್ಲಿ ಮುಂದುವರಿದಿದ್ದು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಹೀಗೆ ಭಾರತವನ್ನೂ ವಿಶ್ವವಂದ್ಯವನ್ನಾಗಿ ಮಾಡುವುದು ಪ್ರಧಾನಿ ಮೋದಿ ಸರ್ಕಾರದ ಗುರಿಯಾಗಿದೆ. ಶಿಲಾನ್ಯಾಸಗೊಂಡ ರೈಲ್ವೇ ಮೇಲ್ಸೇತುವೆಯ ಸಂಪೂರ್ಣ ಖರ್ಚು ರೈಲ್ವೇ ಇಲಾಖೆಯೇ ಭರಿಸುತ್ತಿದ್ದು ಪ್ರಾಯಶಃ ಈ ರೀತಿಯ ಕಾಮಗಾರಿಯು ದೇಶದಲ್ಲಿಯೇ ಪ್ರಥಮ ಎಂದು ಹೇಳಿದರು. 6 ತಿಂಗಳ ಕಾಲಾವಕಾಶವಿದ್ದರೂ ಕೇವಲ 92 ದಿನದಲ್ಲಿ ಕೆಲಸವನ್ನು ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ರೈಲ್ವೇ ಅಧಿಕಾರಿಗಳು ಭರವಸೆಯನ್ನು ನೀಡಿದ್ದಾರೆ ಎಂದು ಅವರು ನುಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಭಾರತವು ಮುಂದಿನ 25 ವರ್ಷಗಳಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿಯನ್ನು ಕಾಣಲಿದೆ ಅದಕ್ಕಾಗಿ ಯುವಜನತೆಯು ಜೀವನಮೌಲ್ಯ, ನಮ್ಮ ದೇಶದ ಸಂಸ್ಕೃತಿ, ರಾಷ್ಟ್ರ ಚಿಂತನೆಯನ್ನು ಮೈಗೂಡಿಸಿಕೊಂಡು ಮುಂದೆ ಸಾಗಬೇಕಿದೆ. ಹಲವು ವರ್ಷಗಳಿಂದ ಕಾಯುತ್ತಿರುವ ನೆಹರೂ ನಗರ ರೈಲ್ವೇ ಮೇಲ್ಸೇತುವೆ ಕಾಮಗಾರಿ ಯಶಸ್ಸಿನಿಂದ ಸಾಗಲೆಂದು ಅವರು ಶುಭ ಹಾರೈಸಿದರು.
ರೈಲ್ವೇಯ ಅಸಿಸ್ಟೆಂಟ್ ಡಿವಿಜನಲ್ ಇಂಜಿನಿಯರ್ ರಾಮಪ್ರಿಯನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಸಾಜ ರಾಧಾಕೃಷ್ಣ ಆಳ್ವ, ಚನಿಲ ತಿಮ್ಮಪ್ಪ ಶೆಟ್ಟಿ, ಆರ್.ಸಿ.ನಾರಾಯಣ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಬಲರಾಮ ಆಚಾರ್ಯ.ಜಿ, ಬಂಗಾರಡ್ಕ ವಿಶ್ವೇಶ್ವರ ಭಟ್, ಅಚ್ಯುತ ನಾಯಕ್, ಇ.ಶಿವಪ್ರಸಾದ್, ರೈಲ್ವೇ ಇಲಾಖೆಯ ಪ್ರಾಜೆಕ್ಟ್ ಇಂಜಿನಿಯರ್ ಅನೂಪ್, ಗುತ್ತಿಗೆದಾರ ಕೃಪಾಲ್ ರೆಡ್ಡಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅನಘ ಮತ್ತು ಸುಮನ ಪ್ರಾರ್ಥಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಸ್ವಾಗತಿಸಿ, ಉಪಾಧ್ಯಕ್ಷ ಸತೀಶ್ ರಾವ್.ಪಿ ವಂದಿಸಿದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಹರಿಪ್ರಸಾದ್.ಡಿ ಕಾರ್ಯಕ್ರಮ ನಿರ್ವಹಿಸಿದರು.