ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ…

"ಸಂಸ್ಕೃತಿ ಸೌಧದ ಉಗ್ರಾಣ ತುಂಬಲಿ": ಭಾಸ್ಕರ ರೈ ಕುಕ್ಕುವಳ್ಳಿ...

ಮಂಗಳೂರು: ‘ನಾಡಿನ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಬೆಳಗಿ ನಮ್ಮನ್ನಗಲಿ ಹೋದ ಸಾಧಕರನ್ನು ಕೇವಲ ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಿದರೆ ಸಾಲದು; ಅವರ ನೆನಪಿನೊಂದಿಗೆ ಅಂಥವರ ಸಾಧನೆಗಳನ್ನೂ ದಾಖಲಿಸುವಂತಾಗಬೇಕು. ಕಣ್ಮರೆಯಾದ ವಿದ್ವಾಂಸರ ಅಪ್ರಕಟಿತ ಕೃತಿಗಳನ್ನು ಪ್ರಕಟಿಸಿ ನಮ್ಮ ಸಂಸ್ಕೃತಿ ಸೌಧದ ಉಗ್ರಾಣವನ್ನು ತುಂಬಬೇಕು’ ಎಂದು ಕರ್ನಾಟಕ ಜಾನಪದ – ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರಗಿದ ದ.ಕ. ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾರ್ಚ್ 23 ರಂದು ದಿನದ ಕೊನೆಯ ಗೋಷ್ಠಿಯಲ್ಲಿ ಪ್ರಧಾನ ಉಪನ್ಯಾಸ ನೀಡಿದ ಅವರು ಈಚೆಗೆ ನಿಧನರಾದ ಕರಾವಳಿಯ ಹಿರಿಯ ಸಾಧಕರನ್ನು ಸ್ಮರಿಸಿ ಮಾತನಾಡಿದರು.
ಅಗಲಿದ ಹಿರಿಯ ಜಾನಪದ ವಿದ್ವಾಂಸ ಪ್ರೊ.ಅಮೃತ ಸೋಮೇಶ್ವರ, ಕಾದಂಬರಿಕಾರ ಕೆ.ಟಿ. ಗಟ್ಟಿ, ಶತಾಯುಷಿ ಮಿಜಾರು ಗುತ್ತು ಆನಂದ ಆಳ್ವ , ಕಥೆಗಾರ ಕೇಶವ ಕುಡ್ಲ, ಯಕ್ಷಗಾನ ರಂಗಸ್ಥಳದ ರಾಜ ಪೆರುವಾಯಿ ನಾರಾಯಣ ಶೆಟ್ಟಿ, ಪತ್ರಕರ್ತ ಮನೋಹರ ಪ್ರಸಾದ್, ರಂಗನಟ ವಿ.ಜಿ.ಪಾಲ್ ಮತ್ತು ಲೇಖಕ ನಾ.ಉಜಿರೆ ಅವರ ವಿಭಿನ್ನ ಬಗೆಯ ಸಾಧನೆಗಳನ್ನು ಪರಿಚಯಿಸಿದ ಭಾಸ್ಕರ ರೈ ಕುಕ್ಕುವಳ್ಳಿ ಅವರೆಲ್ಲರಿಗೂ ನುಡಿ ನಮನ ಸಲ್ಲಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಉಪಸ್ಥಿತರಿದ್ದು ಉಪನ್ಯಾಸಕಾರರನ್ನು ಗೌರವಿಸಿದರು.
ಮಂಗಳೂರು ತಾಲೂಕು ಕ.ಸಾ.ಪ. ಕೋಶಾಧಿಕಾರಿ ಸುಬ್ರಾಯ ಭಟ್ ಎನ್. ಸ್ವಾಗತಿಸಿ, ವಂದಿಸಿದರು. ಬಳಿಕ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಬಳಗದವರಿಂದ ಪ್ರೊ. ಅಮೃತ ಸೋಮೇಶ್ವರ ವಿರಚಿತ ‘ಸಪ್ತ ಮಾತೃಕೆಯರು’ ನೃತ್ಯ ರೂಪಕ ಪ್ರದರ್ಶನಗೊಂಡಿತು.

whatsapp image 2024 03 26 at 4.28.47 pm (1)

whatsapp image 2024 03 26 at 4.37.02 pm
whatsapp image 2024 03 26 at 4.37.02 pm
Sponsors

Related Articles

Back to top button