ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ವಾರ್ಷಿಕೋತ್ಸವ…

ಪುತ್ತೂರು: ಹೊಸ ಹೊಸ ತಂತ್ರಜ್ಞಾನಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಿದಾಗ ಮಾತ್ರ ಅದರ ಆಶಯಗಳು ಸಾಕಾರವಾಗುತ್ತದೆ. ಅದಕ್ಕಾಗಿ ಯುವ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳ ರಾಯಭಾರಿಗಳಾಗಬೇಕು ಎಂದು ಮೈಸೂರಿನ ಎಸ್‍ಡಿಎಂ ರೀಸರ್ಚ್ ಸೆಂಟರ್ ಫಾರ್ ಮೆನೇಜ್‍ಮೆಂಟ್ ಸ್ಟಡೀಸ್ ಇದರ ಅಧ್ಯಕ್ಷ ಡಾ.ವೆಂಕಟ್ರಾಜ್.ಬಿ ಹೇಳಿದರು
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಾರ್ಷಿಕೋತ್ಸವ VIBGYOR-2024 ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶಿಕ್ಷಣ ನೀಡುವ ಸಂಸ್ಥೆಗಳು ಸಾಕಷ್ಟಿವೆ ಆದರೆ ಜೀವನಾನುಭವಗಳನ್ನು, ಸಂಸ್ಕೃತಿ, ಉದ್ದೇಶ, ರಾಷ್ಟ್ರ ಚಿಂತನೆಗಳನ್ನು ತಿಳಿಸುವ ಶಿಕ್ಷಣ ವ್ಯವಸ್ಥೆ ಇಂದಿನ ಆವಶ್ಯಕತೆ ಎಂದರು. ತಮ್ಮ ಯೋಚನೆಗಳನ್ನು ಯೋಜನೆಗಳಾಗಿಸಿ ಅದಕ್ಕೊಂದು ಮೂರ್ತರೂಪ ಕೊಟ್ಟು ಅದನ್ನು ಒಂದು ಉತ್ಪನ್ನವಾಗಿಸಿ ಸಮಾಜದ ಒಳಿತಿಗಾಗಿ ಶ್ರಮಿಸುವ ಜವಾಬ್ಧಾರಿ ನಿಮ್ಮ ಮೇಲಿದೆ ಎಂದರು. ಸನಾತನ ಧರ್ಮವನ್ನು ಮುಂದುವರಿಕೊಂಡು ವಿಕಸಿತ ಭಾರತಕ್ಕಾಗಿ ಕೈಜೋಡಿಸುತ್ತಾ ಭಾರತವು ವಿಶ್ವಗುರುವಾಗುವಲ್ಲಿ ತಮ್ಮ ಕೊಡುಗೆಯನ್ನು ನೀಡಿ ಎಂದು ಹೇಳಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್.ಪಿ ಮಾತನಾಡಿ ಕರಾವಳಿ ಭಾಗದ ಹೆಸರಾಂತ ಕಾಲೇಜಾಗಿ ಗುರುತಿಸಿಕೊಂಡಿರುವ ಈ ಸಂಸ್ಥೆಯು ಕಲಿಕೆಯ ಜತೆಗೆ ಕ್ರೀಡೆ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಶ್ರೇಷ್ಟ ನಿರ್ವಹಣೆಯನ್ನು ನೀಡುತ್ತಿದ್ದು ಅತ್ಯುತ್ತಮ ಸವಲತ್ತುಗಳನ್ನು ಹೊಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ದೇಶದ ಧರ್ಮ ಸಂಸ್ಕೃತಿ, ಆದರ್ಶಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ಪೌರಾಣಿಕ ಪ್ರಸಂಗಗಳನ್ನು ನೆನಪು ಮಾಡಿಕೊಳ್ಳುವ ಆವಶ್ಯಕತೆ ಇದೆ ಎಂದು ಹೇಳಿದರು. ಯಾರಿಗೂ ಕೆಡುಕುಂಟುಮಾಡದೆ ಎಲ್ಲರನ್ನೂ ಒಪ್ಪಿಕೊಂಡು, ಅಪ್ಪಿಕೊಂಡಿರುವ ದೇಶ ಭಾರತ. ಆದರೆ ಇಲ್ಲಿನ ಸನಾತನ ಧರ್ಮವನ್ನು ನಾಶಪಡಿಸುವ, ಹಿಂದೂ ಸಂಸ್ಕೃತಿಯನ್ನು ಹೀಯಾಳಿಸುವ ದುಷ್ಪವೃತ್ತಿಗಳು ಕಂಡುಬರುತ್ತಿದ್ದು ನಮಗೆಲ್ಲರಿಗೂ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದರು. ದುಡ್ಡು ಗಳಿಸುವುದೇ ಧ್ಯೇಯವಾಗಬಾರದು ಬದಲಿಗೆ ತಾನು ಮಾಡುವ ಕೆಲಸ ಸಮಾಜಕ್ಕೆ ಹೇಗೆ ಸಹಾಯಕ ಎನ್ನುವ ವಿಚಾರವರಿತು ಕೆಲಸ ಮಾಡಬೇಕು ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಅಂತರ್ಕಾಲೇಜು ಕ್ರೀಡಾಕೂಟದಲ್ಲಿ ಸಮಗ್ರ ತಂಡ ಪ್ರಶಸ್ತಿಯನ್ನು ಗಳಿಸಿದ ವಿದ್ಯಾರ್ಥಿಗಳ ತಂಡವನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಶೈಕ್ಷಣಿಕವಾಗಿ ಪ್ರತಿ ವಿಭಾಗದಲ್ಲಿಯೂ ಅತ್ಯುತ್ತಮ ಸಾಧನೆಯನ್ನು ತೋರಿದ ಪ್ರತಿಭಾವಂತರಿಗೆ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅನನ್ಯ ಸಾಧನೆಯನ್ನು ಮಾಡಿದ ಸಾಧಕರನ್ನು ಗೌರವಿಸಲಾಯಿತು.
ಕಾಲೇಜಿನ ಪ್ರಥಮ ವರ್ಷದ ಡೇಟಾ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಶರಣಮ್ಮ ನೀಲಪ್ಪ ಮಡಿವಾಳರ್ ಬರೆದಿರುವ ಅಂತರಾಳದ ಭಾವ ಎನ್ನುವ ಕವನ ಸಂಕಲನವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ಡಾ.ಯಶೋಧಾ ರಾಮಚಂದ್ರ, ಸಂತೋಶ್ ಕುತ್ತಮೊಟ್ಟೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಚೇತನ್.ಪಿ.ಡಿ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ವಾರ್ಷಿಕ ವರದಿಯನ್ನು ಮಂಡಿಸಿದರು. ಕು.ನಿವೇತಾ ಸ್ವಾಗತಿಸಿ, ಜೀವಿತ್.ಎಸ್ ವಂದಿಸಿದರು. ರಚನಾ.ಎಂ.ಎಸ್ ಮತ್ತು ವಿದಿಶಾ ಕಾರ್ಯಕ್ರಮ ನಿರ್ವಹಿಸಿದರು.

cd10

cd1

Sponsors

Related Articles

Back to top button