ಪುತ್ತೂರು ತಾಲೂಕು ಪಂಚಾಯತ್ ಮಾಸಿಕ ಕೆಡಿಪಿ ಸಭೆ….
ಪುತ್ತೂರು: ಸರ್ಕಾರದ ವತಿಯಿಂದ 8ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ವಿತರಣೆಯಲ್ಲಿ ಉತ್ತಮ ಗುಣಮಟ್ಟವಿಲ್ಲದ ಸೈಕಲ್ ವಿತರಣೆ ಕಂಡು ಬರುತ್ತಿದ್ದು, ಇದರಿಂದಾಗಿ ಮಕ್ಕಳಿಗೆ ಸೈಕಲ್ ಸಿಕ್ಕಿದರೂ ಉಪಯೋಗವಿಲ್ಲದಂತಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಇತರ ಅನುದಾನವನ್ನು ಶಾಲಾ ಎಸ್‌ಡಿಎಂಸಿ ಖಾತೆಗೆ ಜಮಾ ಮಾಡುವಂತೆ ಸೈಕಲ್ ವಿತರಣಾ ಅನುದಾವನ್ನೂ ನೇರವಾಗಿ ಎಸ್‌ಡಿಎಂಸಿ ಖಾತೆಗೆ ಜಮಾ ಮಾಡುವಂತೆ ಸರ್ಕಾರಕ್ಕೆ ಬರೆಯಲು ತಾಲೂಕು ಪಂಚಾಯತ್ ಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಣಯಿಸಲಾಯಿತು.
ತಾಲೂಕು ಪಂಚಾಯತ್‌ನ ಮಾಸಿಕ ಕೆಡಿಪಿ ಸಭೆಯು ಮಂಗಳವಾರ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಶಿಕ್ಷಣ ಇಲಾಖೆಯ ಪಾಲನಾ ವರದಿಯ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷರು ಸೈಕಲ್ ಕಳಪೆಯಾಗಿರುವ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದರು. ಈ ಸಂದರ್ಭದಲ್ಲಿ ಉತ್ತರಿಸಿದ ಅಧಿಕಾರಿಗಳು ಸೈಕಲ್ ವಿತರಣೆಯನ್ನು ರಾಜ್ಯ ಮಟ್ಟದ ಟೆಂಡರ್‌ದಾರರು ಪೂರೈಕೆ ಮಾಡುತ್ತಿದ್ದಾರೆ. ಈ ಬಗ್ಗೆ ಸಮಿತಿಯಿದ್ದು ಈ ಸಮಿತಿ ಪರಿಶೀಲನೆ ನಡೆಸಿ ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಅಧ್ಯಕ್ಷರ ಮಾತಿಗೆ ಧ್ವನಿಗೂಡಿಸಿ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಪೂರೈಕೆಯಾಗುತ್ತಿರುವ ಸೈಕಲ್‌ಗಳ ಗುಣಮಟ್ಟ ಸರಿಯಿಲ್ಲ. ಇದರಿಂದಾಗಿ ಮಕ್ಕಳಿಗೆ ಸೈಕಲ್ ಸಿಕ್ಕಿದರೂ ಉಪಯೋಗವಿಲ್ಲದಂತಾಗಿದೆ. ತಾಲೂಕು ಮಟ್ಟದಲ್ಲಿ ಸೈಕಲ್‌ನ ಗುಣ ಮಟ್ಟದ ಪರಿಶೀಲನೆ ನಡೆಸಿ ಸೈಕಲ್ ನೀಡುವ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರದ ಉಳಿದ ಅನುದಾನಗಳು ಎಸ್‌ಡಿಎಂಸಿ ಖಾತೆಗೆ ಜಮೆಯಾಗುವ ಮಾದರಿಯಲ್ಲಿ ಸೈಕಲ್ ವಿತರಣಾ ಅನುದಾನವೂ ನೇರವಾಗಿ ಎಸ್‌ಡಿಎಂಸಿ ಖಾತೆಗೆ ಜಮೆಯಾದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ಈ ಬಗ್ಗೆ ಸರ್ಕಾರಕ್ಕೆ ಬರೆಯುವುದಾಗಿ ಅಧ್ಯಕ್ಷರು ತಿಳಿಸಿದರು. ಬಳಿಕ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ತಹಸೀಲ್ದಾರ್ ಅನಂತ ಶಂಕರ್ , ಕಡಬ ತಹಸೀಲ್ದಾರ್ ಜಾನ್ ಪ್ರಕಾಶ್ ಉಪಸ್ಥಿತರಿದ್ದರು.ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ ಕಲಾಪ ನಿರ್ವಹಿಸಿದರು.