ಕಡೇಶಿವಾಲಯ- ಅಜಿಲಮೊಗರು ಸೇತುವೆ ಕಾಮಗಾರಿ ವಿಳಂಬ : ಶಾಸಕ ರಾಜೇಶ್ ನಾಯ್ಕ್ ಗರಂ…

ವರದಿ:ಜಯಾನಂದ ಪೆರಾಜೆ, ಬಂಟ್ವಾಳ

ಬಂಟ್ವಾಳ: ನೇತ್ರಾವತಿ ನದಿಗೆ ಅಜಿಲಮೊಗರು ಐತಿಹಾಸಿಕ ಮಸೀದಿಯಿಂದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಕಡೇಶ್ವಾಲ್ಯದ ಮೂಲಕ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಗಡಿಯಾರ ಎಂಬಲ್ಲಿ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಯು ಕೆಲವು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ವಿಳಂಬ ನೀತಿಯನ್ನು ಬಿಟ್ಟು ಮುಂದಿನ ಬೇಸಗೆಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಸೇತುವೆ ಕಾಮಗಾರಿಯ ವಿಳಂಬದ ಹಿನ್ನೆಲೆಯಲ್ಲಿ ತಮ್ಮ ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಸಭೆ ನಡೆಸಿದರು.
ಸೇತುವೆಯ ಕುರಿತು ಯಾವುದೇ ರೀತಿಯ ಕ್ರೆಡಿಟ್ ನನಗೆ ಬೇಡ.ಆದರೆ ಜನರಿಗೆ ಅನುಕೂಲವಾಗುವ ರೀತಿ ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ತಾಕೀತು ಮಾಡಿದರು. ಸೇತುವೆಗೆ ಸಂಬಂಧಿಸಿ ಶಾಸಕರ ಗಮನಕ್ಕೆ ತಾರದೆ ಹಕ್ಕುಚ್ಯುತಿ ಮಾಡಿರುವ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರೆ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಸೇತುವೆಯ ಬಾಕಿಯಾಗಿರುವ ಎರಡು ಪಿಲ್ಲರ್‌ಗಳಿಗೆ ಸಂಬಂಧಿಸಿ ಕಡತ ಕೆಆರ್‌ಡಿಸಿಎಲ್‌ಗೆ ಹೋಗಿರುವುದಾಗಿ ಕಾರ್ಯನಿರ್ವಾಹಕ ಎಂಜಿನಿಯರ್ ರಘು ಅವರು ಪ್ರಸ್ತಾಪಿಸಿದಾಗ ಶಾಸಕರು ದೂರವಾಣಿ ಮೂಲಕ ಚೀಫ್ ಎಂಜಿನಿಯರ್ ವಸಂತ ನಾಯ್ಕ್ ಅವರನ್ನು ಸಂಪರ್ಕಿಸಿ, ಶೀಘ್ರ ಅನುಮೋದನೆ ನೀಡುವಂತೆ ಸೂಚಿಸಿದರು. ಹಿಂದಿನ ಸರಕಾರದ ಅವಧಿಯಲ್ಲಿ ಈ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದರೆ ಆಗಲೇ ಸಂಬಂಧಪಟ್ಟ ಸಚಿವರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತಿದ್ದೆ ಎಂದರು.
ವಿವಿಧ ಸಮಸ್ಯೆಗಳ ಕುರಿತು ರೈತ ಸಂಘದ ಮುಂದಾಳು ಸರಪಾಡಿ ಅಶೋಕ ಶೆಟ್ಟಿ, ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಸರಪಾಡಿ ಗ್ರಾ.ಪಂ.ಸದಸ್ಯ ಧನಂಜಯ ಶೆಟ್ಟಿ ನಾಡಬೆಟ್ಟು, ಸ್ಥಳೀಯ ಮುಂದಾಳು ಶಶಿಕಾಂತ ಶೆಟ್ಟಿ ಆರುಮುಡಿ, ಮಣಿನಾಲ್ಕೂರು ಗ್ರಾ.ಪಂ.ಸದಸ್ಯ ಸಾಂತಪ್ಪ ಪೂಜಾರಿ ಹಟ್ಟದಡ್ಕ, ಮಣಿನಾಲ್ಕೂರು ಸಿಎ ಬ್ಯಾಂಕ್ ನಿರ್ದೇಶಕ ಪೂವಪ್ಪ ಪೂಜಾರಿ ಕಡಮಾಜೆ ಪ್ರಸ್ತಾಪಿಸಿದರು.
ಜಿ.ಪಂ.ಮಾಜಿ ಸದಸ್ಯ ತುಂಗಪ್ಪ ಬಂಗೇರ, ಕಡೇಶ್ವಾಲ್ಯ ಸಿಎ ಬ್ಯಾಂಕ್ ಅಧ್ಯಕ್ಷ ವಿದ್ಯಾಧರ ರೈ ಪೆರ್ಲಾಪು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸಾಂತಪ್ಪ ಪೂಜಾರಿ, ಅಮರನಾಥ ಶೆಟ್ಟಿ ಕುರ್ಯಾಳ, ಕುಸುಮಾಕರ ಶೆಟ್ಟಿ ಕುರ್ಯಾಳ, ರಾಜೇಂದ್ರ ಪೂಜಾರಿ ಕಡಮಾಜೆ, ರವೀಂದ್ರ ಶೆಟ್ಟಿ ಕೈಯಾಳ, ಆನಂದ ಶೆಟ್ಟಿ ಬಾಚಕೆರೆ ಮೊದಲಾದವರಿದ್ದರು.

Sponsors

Related Articles

Back to top button