ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ – ಶಿಕ್ಷಕರ ದಿನಾಚರಣೆ…
ಮೂಡಬಿದ್ರೆ : ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೆ.5 ರಂದು ಶಿಕ್ಷಕರ ದಿನವನ್ನು ಆಚರಿಸಲಾಯಿತು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, IEEE ವಿದ್ಯಾರ್ಥಿ ಘಟಕ, ISTE ವಿದ್ಯಾರ್ಥಿ ಘಟಕಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೂಡಬಿದ್ರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ (ಆಡಳಿತ) ಡಾ.ಬಿ ಪಿ ಸಂಪತ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಗುರು-ಶಿಷ್ಯ ಸಂಬಂಧ ಅತ್ಯಂತ ಶ್ರೇಷ್ಠ ಹಾಗೂ ಅದು ಅನಿಮಿತ್ತವಾದದ್ದು. ಸ್ವಾರ್ಥವಿಲ್ಲದ, ಪ್ರತಿಫಲ ಅಪೇಕ್ಷೆ ಇಲ್ಲದೆ ವಿದ್ಯಾರ್ಥಿಗಳ ಕ್ಷೇಮವನ್ನು ಬಯಸುವ ವ್ಯಕ್ತಿ ಗುರು. ಶಿಕ್ಷಕ ವೃತ್ತಿ ಎಂಬುದು ಅತ್ಯಂತ ಸಾರ್ಥಕ ಮತ್ತು ಹೆಮ್ಮೆಯ ಸ್ಥಾನವನ್ನು ಹೊಂದಿದೆ. ಇಂದಿನ ಕಾಲಘಟ್ಟದಲ್ಲಿ ಅಧ್ಯಾಪಕರುಗಳಿಗೆ ತುಂಬಾ ಸವಾಲುಗಳಿವೆ. ಅಧ್ಯಾಪನಾ ವೃತ್ತಿಯನ್ನು ಪೂರ್ಣಪ್ರಮಾಣದ ಸಮರ್ಪಣೆಯೊಂದಿಗೆ ಇಷ್ಟಪಟ್ಟು ಮಾಡಬೇಕು ಎಂದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಬರಿ ಪಠ್ಯದಲ್ಲಿರುವ ಶಿಕ್ಷಣವನ್ನಲ್ಲದೆ ಅವರೊಂದಿಗೆ ಸ್ನೇಹಿತನಾಗಿ, ಮಾರ್ಗದರ್ಶಕನಾಗಿ, ತತ್ವಜ್ಞಾನಿಯಾಗಿ ಸೂಕ್ತ ಸಲಹೆ ಸೂಚನೆ ನೀಡಬೇಕು. ಶಿಕ್ಷಕರು ಜ್ಞಾನ, ತಾಳ್ಮೆ ಮತ್ತು ಸಹನೆಯಿಂದ ವಿದ್ಯಾರ್ಥಿಗಳನ್ನು ಗೆಲ್ಲಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಜಿ. ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ನೀಡುವವನು ಶಿಕ್ಷಕ. ಶಿಕ್ಷಣದಿಂದ ಎಲ್ಲವನ್ನೂ ಬದಲಾಯಿಸಲು ಸಾಧ್ಯ. ಕರುಣೆ ಮತ್ತು ಕ್ಷಮೆಯಿಂದ ವಿದ್ಯಾರ್ಥಿಗಳ ಮನಸ್ಸನ್ನು ಗೆಲ್ಲಲು ಸಾಧ್ಯ. ಶಿಕ್ಷಕ ವೃತ್ತಿಯಲ್ಲಿ ನಾವು ವಿದ್ಯಾರ್ಥಿಗಳ ಜೀವನವನ್ನು ಸ್ಪರ್ಶಿಸಬಹುದಾಗಿದೆ ಎಂದರು.
ಪ್ರೊ.ಸೀತಾಲಕ್ಷ್ಮಿ ಪ್ರಾರ್ಥಿಸಿದರು. ಪ್ರೊ. ರೆಬೇಕ ಅತಿಥಿಗಳ ಪರಿಚಯ ಮಾಡಿದರು. ಪ್ರೊ. ಸಬ್ರೀನಾ ವಂದಿಸಿದರು. ಪ್ರೊ. ನಾಝಿಯಾ ಕಾರ್ಯಕ್ರಮ ನಿರೂಪಿಸಿದರು.