ಜೀವನ್ ರಾಂ ಸುಳ್ಯ ನಿರ್ದೇಶನದ ಕಿರುಚಿತ್ರ ‘ಸ್ಥಿತಿ’ ಬಿಡುಗಡೆ…
ಸುಳ್ಯ: ಖ್ಯಾತ ರಂಗಕರ್ಮಿ ಜೀವನ್ ರಾಂ ಸುಳ್ಯ ರವರ ನಿರ್ದೇಶನದ ಕಿರುಚಿತ್ರ ‘ಸ್ಥಿತಿ’ ಬಿಡುಗಡೆ ಕಾರ್ಯಕ್ರಮ
ಸುಳ್ಯದ ರಂಗಮನೆಯಲ್ಲಿ ಜೂ. 30 ರಂದು ನಡೆಯಿತು.
ಸುಳ್ಯ ತಹಶೀಲ್ದಾರ್ ಕು.ಅನಿತಾಲಕ್ಷ್ಮಿಯವರು ಸ್ಥಿತಿ ಕಿರುಚಿತ್ರದ ಪೋಸ್ಟರ್ ಅನಾವರಣಗೊಳಿಸಿ, ಕಂಪ್ಯೂಟರ್ ಬಟನ್ ಒತ್ತಿ ಟಿ.ವಿ.ಪರದೆಯಲ್ಲಿ ಕಿರುಚಿತ್ರದ ಆರಂಭಕ್ಕೆ ಚಾಲನೆ ನೀಡಿದರು. ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಹಾಗೂ ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅತಿಥಿಗಳಾಗಿದ್ದರು.
ಜೀವನ್ ರಾಮ್ ಸುಳ್ಯ, ಮನುಜ ನೇಹಿಗ ಮತ್ತು ಲಾಲಿತ್ಯ ಆರ್. ತಾರಾಗಣದ ಒಂಬತ್ತೂವರೆ ನಿಮಿಷಗಳ ಈ ಕಿರುಚಿತ್ರವನ್ನು ಅತಿಥಿಗಳು ಮತ್ತು ಆಹ್ವಾನಿತ ಪ್ರೇಕ್ಷಕರು ವೀಕ್ಷಿಸಿದರು.
ಕಥೆ,ಸಂಕಲನ ಮತ್ತು ನಿರ್ದೇಶನ ನೀಡಿದ ಜೀವನ್ ರಾಂ ಸುಳ್ಯ ಮಾತನಾಡಿ “ವರ್ತಮಾನದ ನಮ್ಮ ಬದುಕು ಇಷ್ಟೊಂದು ವಿಷಮ ಸ್ಥಿತಿಗೆ ತಲುಪಬಹುದೆಂದು ಯಾರೂ ಊಹಿಸಿರಲಿಲ್ಲ.ಆಧುನೀಕರಣದ ಭರಾಟೆಯಲ್ಲಿ ನೂರಾರು ಸವಲತ್ತುಗಳ ನಡುವೆ ನಮಗೆ ನಾವೇ ಹಾಕಿಕೊಂಡ ಬಂಧನದಿಂದ ಹೊರಬರಲಾರದೆ ಒದ್ದಾಡುವ ಮತ್ತು ಈ ದುಸ್ಥಿತಿ ಮುಗ್ಧ ಮನಸ್ಸುಗಳ ಮೇಲೆ ಬೀರುವ ದುಷ್ಪರಿಣಾಮ ಮುಂತಾದ ಸೂಕ್ಷ್ಮಗಳನ್ನು ಅತ್ಯಂತ ಸರಳವಾಗಿ ವಿವರಿಸುವ ಪ್ರಯತ್ನವೇ ಈ ಕಿರುಚಿತ್ರ ‘ಸ್ಥಿತಿ ‘ “ಎಂದರು.
ಚಿತ್ರ ನೋಡಿ ಪ್ರತಿಕ್ರಿಯಿಸಿದ ತಹಶಿಲ್ದಾರ್ ಕು| ಅನಿತಾ ಲಕ್ಷ್ಮೀ ಯವರು” ಕೊರೋನಾ ಸಂದರ್ಭದಲ್ಲಿ ಒಂದು ಒಳ್ಳೆಯ ಸಿನೆಮಾ ನಿರ್ಮಾಣ ಮಾಡಿದ ತಂಡದ ಎಲ್ಲರೂ ಪ್ರಶಂಸನೀಯರು..ಪ್ರತಿಯೊಬ್ಬರೂ ಈ ಕಿರುಚಿತ್ರ ನೋಡಬೇಕು ” ಎಂದರು.
ಮುಖ್ಯ ಅತಿಥಿಯಾಗಿದ್ದ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಮಾತನಾಡಿ” ಒಂದು ಗಂಭೀರ ವಿಷಯವನ್ನು ಅತ್ಯಂತ ಚೊಕ್ಕವಾಗಿ,ಭಾವನಾತ್ಮಕವಾಗಿ ಪ್ರಸ್ತುತ ಪಡಿಸಿದ ರೀತಿ ನಿಜಕ್ಕೂ ಮೆಚ್ಚುವಂತಾದ್ದು.. ಈ ಚಿತ್ರ ನೋಡುಗರನ್ನು ಬೆರಗು ಮೂಡಿಸುವದರಲ್ಲಿ ಸಂದೇಹವಿಲ್ಲ ” ಎಂದರು.
ಮತ್ತೊಬ್ಬ ಅತಿಥಿ ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ಬಂಟ್ವಾಳ ಮಾತನಾಡಿ “ನಮ್ಮೆಲ್ಲರನ್ನೂ ಒಮ್ಮೆಗೆ ಯೋಚಿಸುವಂತೆ ಮಾಡುವ ಚಿತ್ರ ಇದು.ಕೇವಲ ಒಂಬತ್ತು ನಿಮಿಷದಲ್ಲಿ ಈಗಿನ ಕಾಲ ಘಟ್ಟದ ವೇದನೆಯನ್ನು ಅತ್ಯಂತ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ ಜೀವನ್ ರಾಂ ” ಎಂದರು.
ಕಲಾವಿದರ ಮನೋಜ್ಞ ಅಭಿನಯ,ಕ್ಯಾಮರಾ,ಬೆಳಕು,ಸಂಗೀತ,ಸಂಕಲನ ಎಲ್ಲವೂ ಇದರ ಪ್ಲಸ್ ಪಾಯಿಂಟ್. ಈ ಚಿತ್ರದ ಸಿನಿಮಾಟೊಗ್ರಾಫಿಯನ್ನು ಅಹಮ್ಮದ್ ಝೀಶನ್,ಸಹನಿರ್ದೇಶನ ಹರ್ಷಿತ್ ಕೆ. ತಾಂತ್ರಿಕವಾಗಿ ಕುಸುಮಾಧರ ಸಂಕಡ್ಕ ಮತ್ತು ರವೀಶ್ ಪಡ್ಡಂಬೈಲು ಸಹಕರಿಸಿದ್ದಾರೆ.