ಎಸ್.ಡಿ ಎಂ. ಕಾನೂನು ಕಾಲೇಜಿನಲ್ಲಿ ಪಾತಾಳ – ಶೆಟ್ಟಿಗಾರ್ ಅವರಿಗೆ ಶ್ರದ್ಧಾಂಜಲಿ…

ಮಾರ್ಗದರ್ಶಕ ಕಲಾವಿದರ ಕಣ್ಮರೆ: ಭಾಸ್ಕರ ಕುಕ್ಕುವಳ್ಳಿ...

ಮಂಗಳೂರು: ‘ಯಕ್ಷಗಾನ ರಂಗಕ್ಕೆ ವಿಶಿಷ್ಟ ಕೊಡುಗೆ ನೀಡಿದ ಮಾರ್ಗದರ್ಶಕ ಕಲಾವಿದರಿಬ್ಬರನ್ನು ಕೇವಲ ಎರಡು ದಿನಗಳ ಅಂತರದಲ್ಲಿ ಕಳೆದುಕೊಂಡಿದ್ದೇವೆ. ಶತಮಾನದ ಹಾದಿಯಲ್ಲಿದ್ದ 92ರ ಹರೆಯದ ಪಾತಾಳ ವೆಂಕಟರಮಣ ಭಟ್ಟರು ಯಕ್ಷಗಾನದ ವೇಷ ಭೂಷಣ, ನೃತ್ಯಾಭಿನಯಗಳಲ್ಲಿ ಹೊಸ ಪ್ರಯೋಗ ಶೀಲತೆಯ ಮೂಲಕ ಪರಂಪರೆಯನ್ನು ಎತ್ತಿ ಹಿಡಿದವರು; ಹಾಗೆಯೇ ಇನ್ನೂ ಬದುಕಿ ರಂಗದಲ್ಲಿ ಮೆರೆಯಬೇಕಾಗಿದ್ದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರು ಬಣ್ಣದ ವೇಷಗಾರಿಕೆಯಲ್ಲಿ ಸೃಜನಶೀಲತೆಯನ್ನು ತೋರಿದವರು.ಇವರ ಕಣ್ಮರೆ ಯಕ್ಷಗಾನ ವಲಯದಲ್ಲಿ ಬಹುದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ ‘ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ‌.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಯಕ್ಷೋತ್ಸವ ಸಮಿತಿ ಮತ್ತು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಸಮಿತಿ ವತಿಯಿಂದ ಜುಲೈ 21ರಂದು ಕಾಲೇಜು ಸಭಾಂಗಣದಲ್ಲಿ ಜರಗಿದ ಪಾತಾಳ ವೆಂಕಟರಮಣ ಭಟ್ ಮತ್ತು ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಂಸ್ಮರಣಾ ಜ್ಯೋತಿ ಬೆಳಗಿ ಅವರು ನುಡಿ ನಮನ ಸಲ್ಲಿಸಿದರು. ಯಕ್ಷೋತ್ಸವ ಸಮಿತಿ ಸಂಚಾಲಕ ಮತ್ತು ಪ್ರಾಧ್ಯಾಪಕ ಪ್ರೊ.ಪುಷ್ಪರಾಜ್ ಕೆ. ಅವರು ಪ್ರಾಸ್ತಾವಿಕ ಮಾತಿನೊಂದಿಗೆ ಅಗಲಿದ ಕಲಾವಿದದ್ವಯರ ಗುಣಗಾನ ಮಾಡಿದರು.
ಹಿರಿಯ ಯಕ್ಷಗಾನ ಕಲಾವಿದ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಗತಿಸಿದ ಇಬ್ಬರು ಕಲಾವಿದರೊಂದಿಗಿನ ತನ್ನ ಒಡನಾಟವನ್ನು ಸ್ಮರಿಸಿ ಶ್ರದ್ಧಾಂಜಲಿ ಸಮರ್ಪಿಸಿದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್ ನುಡಿ ನಮನ ಸಲ್ಲಿಸಿದರು. ಯಕ್ಷಗಾನದ ಅಭಿಮಾನಿಗಳು ಮತ್ತು ಯಕ್ಷೋತ್ಸವ ಸಮಿತಿ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಅಗಲಿದ ಕಲಾವಿದರಿಗೆ ಮೌನ ಪ್ರಾರ್ಥನೆಯ ಮೂಲಕ ಸದ್ಗತಿ ಕೋರಲಾಯಿತು.

75cec0fb d27b 4f98 8dce 4621359028b6

Related Articles

Back to top button