ಕೊರೋನಾ – ಡಾ.ಗಿರಿಧರ ಕಜೆ ನೇತೃತ್ವದ ತಂಡದ ಪ್ರಯೋಗ ಯಶಸ್ವಿ…

ಬೆಂಗಳೂರು : ಆಯುರ್ವೇದದಿಂದ ಕೊರೋನಾ ನಿವಾರಣೆರ ಸಾಧ್ಯ ಎಂಬುದು ಇದೀಗ ಬೆಂಗಳೂರಿನಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ ನಿಂದ ದೃಢಪಟ್ಟಿದೆ. ಸರ್ಕಾರದ ಮಾರ್ಗಸೂಚಿಯಂತೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ 10 ಸೋಂಕಿತರ ಮೇಲೆ ನಡೆಸಲಾದ ಪ್ರಯೋಗ ಯಶಸ್ಸು ಕಂಡಿದ್ದು ಕೇವಲ 9 ದಿನದಲ್ಲಿ ಕೊರೋನಾ ಪಾಸಿಟಿವ್ ರೋಗಿಗಳು ನೆಗೆಟಿವ್ ವರದಿ ಪಡೆದಿದ್ದಾರೆ.
ಪ್ರಖ್ಯಾತ ಆಯುರ್ವೇದ ವೈದ್ಯ ಡಾ.ಗಿರಿಧರ ಕಜೆ ನೇತೃತ್ವದ ತಂಡದವರು ವೈರಸ್ ಸಂಬಂಧಿತ ಸೋಂಕುಗಳಿಗೆ ಔಷಧ ಕಂಡು ಹಿಡಿದಿದ್ದರು. ಪ್ರಯೋಗ ನಡೆಸಲು ಅವಕಾಶಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಯಿತು. ಕೊನೆಗೂ ಸರ್ಕಾರ ನಿಯಮಾವಳಿ ಪ್ರಕಾರ ಕಜೆಯವರಿಗೆ ಅವಕಾಶ ನೀಡಿತ್ತು.
ಸಿಎಂಆರ್ ಅಧೀನದ ಕ್ಲಿನಿಕಲ್ ಟ್ರಯಲ್ ರಿಜಿಸ್ಟ್ರಿ ಆಫ್ ಇಂಡಿಯಾದಲ್ಲಿ ನೋಂದಣಿಯಾದ ಸಂಶೋಧನೆಗೆ ಬೆಂಗಳೂರು ಮೆಡಿಕಲ್ ಕಾಲೇಜು ಎಥಿಕ್ಸ್ ಸಮಿತಿ ಮೇ 16ರಂದು ಅನುಮತಿ ನೀಡಿತ್ತು. 10 ರೋಗಿಗಳ ಮೇಲೆ ಪ್ರಯೋಗ ನಡೆದಿದ್ದು ಅವರೆಲ್ಲರೂ ಕೂಡಾ ಕೊರೋನಾ ಗೆಲ್ಲುವುದೇ ಅನುಮಾನ ಎನ್ನಲಾಗಿತ್ತು. ಆದರೆ ಕಜೆಯವರು ಸಂಶೋಧಿಸಿದ ಭೌಮ್ಯ, ಸಾತ್ಮ್ಯ ಎಂಬ ಎರಡು ಮಾತ್ರೆಗಳು ಚಮತ್ಕಾರ ಮಾಡಿದೆ.
ಈಗ ನಡೆದಿರುವ ಪ್ರಯೋಗ ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಕಜೆಯವರು ಸಂಶೋಧಿಸಿದ ಆಯುರ್ವೇದ ಔಷಧವನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ ಕುರಿತಂತೆ ಚರ್ಚೆ ನಡೆಯುತ್ತಿದೆ.
ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಅವರು ಕೊರೊನ ಸೋಂಕಿಗೆ ಆಯುರ್ವೇದ ಔಷಧವನ್ನು ಅತ್ಯಂತ ಪರಿಣಾಮಕಾರಿಯಾಗಿ ಉಪಯೋಗಿಸಿ ಗುಣಪಡಿಸಬಹುದೆಂದು ಉಲ್ಲೇಖಿಸಿದ್ದನ್ನು varthaloka.com ನಲ್ಲಿ ಏಪ್ರಿಲ್ ತಿಂಗಳಿನಲ್ಲಿಯೇ ಪ್ರಕಟಿಸಲಾಗಿತ್ತು.