ಗಝಲ್…

ಗಝಲ್…
ಎನಿತು ಕಠಿಣ ದಿನವು ಬರಲು
ಬೆಳಕ ಕಾಣಿಸಿದೆಯಲ್ಲ ನೀನು
ಮುಗಿಲ ಸರಿಸಿ ಮಳೆಯ ಸುರಿಸಿ
ಇಳೆಯ ತಣಿಸಿದೆಯಲ್ಲ ನೀನು
ಮುಳ್ಳಿನಿಂದ ಬೆರೆತ ಹೂವು
ಅರಳಿ ನಗಲು ಜಗದಿ ಸೊಗಸು
ದಿವದ ನೆನಪು ಮನದಿ ಮೂಡಿ
ದುಗುಡ ಮಣಿಸಿದೆಯಲ್ಲ ನೀನು
ಸರಣಿ ಸೋಲು ಹರಿದು ಬರಲು
ಗೆಲುವೆನೆಂಬ ಕಿರಣ ಸಾಕು
ಮೊಗವು ಮುದುಡಿ ತಣ್ಣಗಿರಲು
ತನುವ ಕುಣಿಸಿದೆಯಲ್ಲ ನೀನು
ಬದುಕು ಬಂಡಿ ಸಾಗುತಿರಲು
ಮನದ ತುಂಬಾ ಅರಿವು ಬೇಕು
ಕಾಡುತಿರುವ ನೋವು ಕಳೆದು
ಹರುಷ ಉಣಿಸಿದೆಯಲ್ಲ ನೀನು
ಜಗದ ಬದುಕು ಜನ್ಮ ಟಾಪು
ಕಲೆಯು ಗೀತ ಜೀವಧಾತು
ವಿಪುಲವಾಗಿ ಹರಿದುಬರಲು
ನಲವು ದ್ವಿಗುಣಿಸಿದೆಯಲ್ಲ ನೀನು
ಡಾ. ವೀಣಾ ಎನ್ ಸುಳ್ಯ