ಜನರ ಬದುಕಿನ ಜೊತೆ ಸರಕಾರದ ಚೆಲ್ಲಾಟ – ಬೆಲೆ ಏರಿಕೆ ವಿರುದ್ಧ ಕಾಂಗ್ರೇಸ್ ಮುಖಂಡ ಟಿ.ಎಂ.ಶಹೀದ್ ತೆಕ್ಕಿಲ್ ಆಕ್ರೋಶ…
ಸುಳ್ಯ : ಕೇಂದ್ರ ಮತ್ತು ರಾಜ್ಯ ಸರಕಾರದ ನಡವಳಿಕೆಯಿಂದ ಪೆಟ್ರೋಲ್, ಡೀಸಲ್ ಮತ್ತು ಅಡುಗೆ ಅನಿಲ ಬೆಲೆಯೂ ಗಗನಕ್ಕೇರಿದೆ . ಈಗಾಗಲೇ ಪೆಟ್ರೋಲ್ ಬೆಲೆಯೂ ಶತಕ ಭಾರಿಸಿದ್ದು, ಡೀಸಲ್ ಬೆಲೆಯೂ ಶತಕದ ಹೊಸ್ತಿಲಿನಲ್ಲಿದೆ. ಅಡುಗೆ ಅನಿಲದ ಬೆಲೆಯೂ ಜನರಿಗೆ ಎಟುಕದ ಸ್ಥಿತಿಗೆ ತಲುಪಿದೆ. ಇದಕ್ಕೆಲ್ಲಾ ಕೇಂದ್ರ ಮತ್ತು ರಾಜ್ಯ ಸರಕಾರದ ಆರ್ಥಿಕ ನೀತಿಯೇ ಕಾರಣ. ಇಂದು ರಾಜ್ಯದಲ್ಲಿ ವಿದ್ಯುತ್ ಬೆಲೆಯು ಯುನಿಟ್ ಗೆ 30 ಪೈಸೆ ಹೆಚ್ಚಳವಾಗಿದ್ದು ಕೊರೋನದಿಂದ ಸಂಕಷ್ಠಕ್ಕೊಳಗಾದ ಜನತೆಯು ಮತ್ತಷ್ಟು ಕುಗ್ಗುವಂತಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಸರಕಾರದ ಅನೈತಿಕ ಆರ್ಥಿಕ ನೀತಿಯನ್ನು ಕಾಂಗ್ರೇಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಟೀಕಿಸಿದ್ದಾರೆ .
ಕೊರೋನ ಎರಡನೆಯ ಅಲೆಯಿಂದ ತತ್ತರಗೊಂಡ ಜನರು ಬದುಕುವುದೇ ಕಷ್ಠಕರವಾಗಿದೆ. ಲಾಕ್ ಡೌನ್ , ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್,ಡೀಸಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆಯಿಂದ ಜನರು ಜೀವನ ನಡೆಸುವುದು ಕಷ್ಠವಾಗಿದೆ. ನಿರುದ್ಯೋಗ ಹೆಚ್ಚುತ್ತಿರುವ ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರವು ಸಾಮಾನ್ಯ ಜನರ ಜೇಬಿಗೆ ಕನ್ನ ಹಾಕುತ್ತಿದೆ ಎಂದೂ ಕಾಂಗ್ರೇಸ್ ಮುಖಂಡ ಟಿ.ಎಂ.ಶಹೀದ್ ತೆಕ್ಕಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .