ಬಾಲಕನ ಅಪರಹಣ ಪ್ರಕರಣ: ಮತ್ತೋರ್ವ ಆರೋಪಿ ಬಂಧನ…..
ಪುತ್ತೂರು: ಪುತ್ತೂರಿನ ಬಲ್ನಾಡು ಎಂಬಲ್ಲಿ ಪತ್ತೆಯಾದ ಅಪ್ರಾಪ್ತ ಬಾಲಕನ ಅಪರಹಣ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಸಂಪ್ಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ಮೂಲಕ ಮಹೇಶ್(32) ಎಂದು ಗುರುತಿಸಲಾಗಿದೆ. ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಆಂದ್ರ ಮೂಲದ ಶಿಲ್ಪಾ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇದೀಗ ಆಕೆಯ ಪತಿ ಎನ್ನಲಾಗಿರುವ ಮಹೇಶ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಿಲ್ಪಾ ಬಾಲಕನನ್ನು ಬಲ್ನಾಡಿನ ವ್ಯಕ್ತಿಯೊಬ್ಬರ ಮನೆಯಲ್ಲಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.
ಬಾಲಕನ ಅಪರಹಣ ಪ್ರಕರಣವನ್ನು ಬಲ್ನಾಡು ಗ್ರಾಪಂ ಸದಸ್ಯರು ಹಾಗೂ ಪುತ್ತೂರು ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಪತ್ತೆ ಹಚ್ಚಿ ಸೆ.10ರಂದು ಪುತ್ತೂರಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರ ಮೂಲಕ ಮಂಗಳೂರಿನ ಮಕ್ಕಳ ಸಹಾಯವಾಣಿಗೆ ಕಚೇರಿಗೆ ತಂದೊಪ್ಪಿಸಿದ್ದರು. ಅಲ್ಲಿ ಬಾಲಕನಿಗೆ ಆಪ್ತ ಸಮಾಲೋಚನೆ ನಡೆಸಿದಾಗ ತಾನು ಆಂದ್ರ ಪ್ರದೇಶದ ಓಂಗೋಳ ಸಮೀಪದ ಸೀತಾರಾಮ್ ಪುರ ನಿವಾಸಿಯಾಗಿದ್ದು, ಬೆಂಗಳೂರಿನ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ಮಲಗಿದ್ದಾಗ ಶಿಲ್ಪಾ ಎಂಬವರು ತನ್ನನ್ನು ಕರೆದುಕೊಂಡು ಪುತ್ತೂರಿಗೆ ಬಂದಿರುವುದಾಗಿ ಮಾಹಿತಿ ನೀಡಿದ್ದ. ಈ ಹಿನ್ನಲೆಯಲ್ಲಿ ಬಾಲಕನನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜ ಅವರ ಆದೇಶದ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ಸೂಕ್ತ ಪುನರ್ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಬಗ್ಗೆ ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಬಾಲಕನ ಪ್ರಕರಣ ದಾಖಲಿಸಿಕೊಂಡು ಶಿಲ್ಪಾ ಅವರನ್ನು ಬಂಧಿಸಿದ್ದರು. ಇದೀಗ ಆಕೆಯ ಪತಿ ಎನ್ನಲಾಗಿದ್ದ ಮಹೇಶ್ ಅವರನ್ನು ಬಂಧಿಸಲಾಗಿದೆ.