ಯೆನೆಪೋಯ ಇಂಜಿನಿಯರಿಂಗ್ ಕಾಲೇಜು – ಮೊದಲ ವರ್ಷದ ತರಗತಿಗಳು ಆರಂಭ…
ಮೂಡುಬಿದ್ರಿ: ಇಲ್ಲಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೊದಲ ವರ್ಷದ ವಿದ್ಯಾರ್ಥಿ ಸೇರ್ಪಡೆ ಮತ್ತು ತರಗತಿಗಳ ಆರಂಭ ಕಾರ್ಯಕ್ರಮ ಅ. 21 ರಂದು ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ವಿಭಾಗದ ಪ್ರೊಫೆಸರ್ ಮತ್ತು MIT ಮಣಿಪಾಲ್, MAHE ಯ ಮಾಜಿ ಜಂಟಿ ನಿರ್ದೇಶಕ ಡಾ.ವೆಂಕಟರಾಮ ಪೈ ಮಾತನಾಡಿ, ಪ್ರತಿ ವಿದ್ಯಾರ್ಥಿಯಲ್ಲೂ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗುತ್ತದೆ ಎಂದರಲ್ಲದೆ ಹೆತ್ತವರು, ಪೋಷಕರು ತಮ್ಮ ಮಕ್ಕಳ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ.ಅದನ್ನು ನನಸು ಮಾಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಧ್ಯೇಯವಾಗಬೇಕು ಎಂದರು. ಬದಲಾವಣೆಯ ವೇಗ ಅತಿಯಾದದ್ದು. ಅದರಲ್ಲೂ ತಾಂತ್ರಿಕ ಕ್ಷೇತ್ರದಲ್ಲಿ ಆಗುತ್ತಿರುವ ಅತಿ ವೇಗದ ಬದಲಾವಣೆಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕು. ಹೊಸ ಹೊಸ ಸವಾಲುಗಳನ್ನು ಎದುರಿಸುವಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅತಿ ಪ್ರಾಮುಖ್ಯದ ಪಾತ್ರ ವಹಿಸಬೇಕು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮಷೀನ್ ಲರ್ನಿಂಗ್, ಕ್ಲೌಡ್ ಕಂಪ್ಯೂಟಿಂಗ್ ಮೊದಲಾದ ಹೊಸ ಹೊಸ ತಂತ್ರಜ್ಞಾನಗಳನ್ನು ಕಲಿಯುವುದರೊಂದಿಗೆ ಕಾಲೇಜು ನೀಡುವ ವಿವಿಧ ಅವಕಾಶಗಳನ್ನೂ ಸದುಪಯೋಗ ಮಾಡಿಕೊಳ್ಳಬೇಕು. ಅತ್ಯುತ್ತಮ ಜ್ಞಾನ ಗಳಿಸುವುದರೊಂದಿಗೆ ಸಹನೆ, ಮಾನವೀಯತೆ, ಪರಿಸರ ಪ್ರೇಮ ಸೇರಿದಂತೆ ಮಾನವೀಯ ಮೌಲ್ಯಗಳನ್ನೂ ಬೆಳೆಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಏನಾಗಬೇಕೋ ಅದನ್ನು ಅವರೇ ನಿರ್ಧರಿಸಬೇಕು. ಋಣಾತ್ಮಕ ಚಿಂತನೆಗಳನ್ನು ತ್ಯಜಿಸಿ ಧನಾತ್ಮಕ ಯೋಚನೆಗಳನ್ನು ಮಾಡಬೇಕು. ಆಶಾವಾದಿಯಾಗಿರಬೇಕು, ನಿರಂತರ ಕ್ರಿಯಾಶೀಲವಾಗಿದ್ದುಕೊಂಡು ಸೃಜನಶೀಲ ಯೋಚನೆ-ಕೆಲಸ ಮಾಡಲು ಯತ್ನಿಸಬೇಕು. ಸ್ವಯಂ ಶಿಸ್ತು ಅಳವಡಿಸಿಕೊಂಡು ನಿರಂತರ ನೂತನ ವಿಷಯಗಳನ್ನು ಕಲಿಯುತ್ತಿರಬೇಕು ಎಂದರು.
ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್ ಉಪಸ್ಥಿತರಿದ್ದರು. ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಹೆತ್ತವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರೊ.ವಾಣಿ ಸ್ವಾಗತಿಸಿದರು. ವಿದ್ಯಾರ್ಥಿ ಮೊಹಮ್ಮದ್ ಫೈಝನ್ ಪ್ರಾರ್ಥಿಸಿದರು. ಪ್ರೊ. ಎಸ್.ವಿ ಪ್ರಸಾದ್ ಅತಿಥಿ ಪರಿಚಯ ಮಾಡಿದರು. ಪ್ರೊ. ವಿನೀತ ಡಿಸೋಜಾ ವಂದಿಸಿದರು. ಪ್ರೊ. ಕಾವ್ಯ ಕಾರ್ಯಕ್ರಮ ನಿರೂಪಿಸಿದರು.