ಮುಕ್ಕ ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಐಸಾಪ್-2019” ಉದ್ಘಾಟನೆ….
ಸುರತ್ಕಲ್: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆರಂಭಿಕ ಹಂತದಲ್ಲಿ ತಾಂತ್ರಿಕ ವಿಷಯಗಳ ಕುರಿತು ಜ್ಞಾನಾರ್ಜನೆ ಮತ್ತು ಸಂವಹನ ಕೌಶಲ್ಯವನ್ನು ಹೆಚ್ಚಿಸುವ ಉದ್ದೇಶದಿಂದ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ “ಐಸಾಪ್-2019” (ಇನ್ಫಾರ್ಮೇಶನ್ ಸರ್ಚ್, ಅನಾಲಿಸಿಸ್ ಆಂಡ್ ಪ್ರೆಸೆಂಟೇಷನ್) ಕಾರ್ಯಕ್ರಮವನ್ನು ಮುಕ್ಕದಲ್ಲಿರುವ ಶ್ರೀನಿವಾಸ್ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಸೆಪ್ಟೆಂಬರ್ 21 ರಂದು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿಯ ಮಹೇಶ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಕಾರ್ತಿಕ್ ಕೋಟೆಯವರು ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇವಲ ವಿದ್ಯಾರ್ಜನೆ ಮಾತ್ರವಲ್ಲದೆ, ಸಂವಹನ-ಆಲೋಚನೆ-ವಿವೇಚನೆ-ಸಂಶೋಧನೆ ಮೊದಲಾದ ಉತ್ತಮ ಗುಣಗಳನ್ನು ಕ್ರೋಡೀಕರಿಸಿಕೊಳ್ಳಬೇಕು. ವೇಗವಾಗಿ ಬದಲಾಗುತ್ತಿರುವ ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಸ್ವಂತಿಕೆ ಮತ್ತು ನವೀನತೆಯ ಮೂಲಕ ಜ್ಞಾನಾರ್ಜನೆಯನ್ನು ಮಾಡಬೇಕು. ಕಾಲೇಜಿನಲ್ಲಿ ಆಯೋಜಿಸುತ್ತಿರುವ ಇಂತಹ ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮನ್ನು ಸಮರ್ಥವಾಗಿ ತೊಡಗಿಸಿಕೊಂಡು ಕಾರ್ಯಕ್ರಮದ ಸಂಪೂರ್ಣ ಉಪಯೋಗವನ್ನು ಪಡೆಯುವಂತಾಗಬೇಕು ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣವನ್ನು ಮಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಥಾಮಸ್ ಪಿಂಟೋ ರವರು ಈ ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ. ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡತಕ್ಕಂತಹ ಎಲ್ಲಾ ಗುಣಗಳು ಇವೆ. ಆದ್ದರಿಂದ ಈ ಸಂಸ್ಥೆಯಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯನ್ನು ಮಾಡಲು ಐಸಾಪ್ ನಂತಹ ಉತ್ತಮ ವೇದಿಕೆಯನ್ನು ನಾವು ಕಲ್ಪಿಸುತ್ತಿದ್ದೇವೆ ಎಂದು ಹೇಳಿದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಸಮನ್ವಯಕಾರರಾದ ಡಾ. ಪ್ರವೀಣ್ ಬಿ. ಎಂ. ಮಾತನಾಡಿ, ಐಸಾಪ್ ಕಾರ್ಯಕ್ರಮವು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಜ್ಞಾನಾರ್ಜನೆ, ವಿಷಯಗಳನ್ನು ಸಂಶೋಧಿಸುವ ಕ್ಷಮತೆ ಹಾಗೂ ವ್ಯಕ್ತಿತ್ವ ವಿಕಾಸವನ್ನು ವೃದ್ಧಿಸುವಲ್ಲಿ ಉತ್ತಮ ಕೊಡುಗೆಯನ್ನು ನೀಡಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಚಾಲಕರಾದ ಡಾ. ರಾಮಕೃಷ್ಣ ಹೆಗಡೆ ಯವರು ಸ್ವಾಗತ ಭಾಷಣ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು ಹಾಗೂ ಕಳೆದ ಹತ್ತು ವರ್ಷಗಳಿಂದ ಕಾಲೇಜಿನಲ್ಲಿ ಆಯೋಜಿಸುತ್ತಿರುವ ಐಸಾಪ್ ಕಾರ್ಯಕ್ರಮದ ಹಿನ್ನಲೆಯನ್ನು ನೀಡಿದರು.
ಇಂಜಿನಿಯರಿಂಗ್ ವಿದ್ಯಾರ್ಥಿ ದಿನಕರ ಪ್ರಾರ್ಥನೆಯನ್ನು ಮಾಡಿದರು. ಪ್ರೊ. ಅಮೃತ್ ರವರು ಮುಖ್ಯ ಅತಿಥಿ ಡಾ. ಕಾರ್ತಿಕ್ ಕೋಟೆಯವರನ್ನು ಸಭೆಗೆ ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಕುಮಾರಿ ಡೆಲಿಷಾ ಮತ್ತು ಮಾನಸ ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರೊ. ರೋಹನ್ ಫೆರ್ನಾಂಡಿಸ್ ಧನ್ಯವಾದ ಸಮರ್ಪಣೆ ಮಾಡಿದರು. ವಿವಿಧ ಇಂಜಿನಿಯರಿಂಗ್ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.