ಗ್ರಾ.ಪಂ. ಸದಸ್ಯ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ರನ್ನು ತೆಗೆದು ಹಾಕುವ ನಿಯಮಗಳು 2022 ಕರಡು ಅಧಿಸೂಚನೆ – ಶಾಸಕ ಮಂಜುನಾಥ ಭಂಡಾರಿ ವಿರೋಧ…

ಮಂಗಳೂರು: ಕರ್ನಾಟಕ ಸರ್ಕಾರವು ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ಪ್ರಕರಣ 43(ಆ),48(4) ಹಾಗು 48(5) ಕ್ಕೆ ತಿದ್ದುಪಡಿ ತಂದು ಹೊರಡಿಸಿರುವ, “ಗ್ರಾಮ ಪಂಚಾಯತಿಯ ಸದಸ್ಯ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ರನ್ನು ತೆಗೆದು ಹಾಕುವ ನಿಯಮಗಳು 2022” ಕರಡು ಅಧಿಸೂಚನೆಯನ್ನು ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರು ತೀವ್ರವಾಗಿ ವಿರೋಧಿಸಿದ್ದಾರೆ.
ದುರ್ನಡತೆ ಹೆಸರಿನಲ್ಲಿ ದೂರು ಸ್ವೀಕಾರ, ತನಿಖೆ ಹಾಗೂ ವಿಚಾರಣೆ ಜವಾಬ್ದಾರಿಯನ್ನು ಕೆಳ ಹಂತದ ಅಧಿಕಾರಿಗಳಿಗೆ ನೀಡುವ ಮೂಲಕ ಸರ್ಕಾರ ಗ್ರಾಮ ಪಂಚಾಯತ್ ಪ್ರತಿನಿಧಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಅಧಿಕಾರಿಗಳ ಮೂಲಕ ಮೊಟಕುಗೊಳಿಸುವ ಹುನ್ನಾರ ನಡೆಸಿದೆ. ಗ್ರಾಮೀಣ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಶಾಹಿಗಳ ಹಸ್ತಕ್ಷೇಪಕ್ಕೆ ವಿನಾಕಾರಣ ಅವಕಾಶ ಮಾಡಲಾಗುತ್ತಿದ್ದು, ಇದರಿಂದ ವಿಕೇಂದ್ರೀಕರಣ ವ್ಯವಸ್ಥೆಗೆ ದಕ್ಕೆ ಬರಲಿದೆ. ಆದ್ದರಿಂದ ದಿನಾಂಕ 27/7/2022 ರಂದು ಸರ್ಕಾರ ಹೊರಡಿಸಿರುವ “ಗ್ರಾಮ ಪಂಚಾಯತಿಯ ಸದಸ್ಯ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ರನ್ನು ತೆಗೆದು ಹಾಕುವ ನಿಯಮಗಳು 2022” ತೀವ್ರವಾಗಿ ವಿರೋದಿಸುತ್ತೇನೆ. ಈ ಬಗ್ಗೆ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ, ಇತರೇ ಪರಿಷತ್ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ಅಧಿವೇಶನದಲ್ಲಿ ವಿಷಯವನ್ನು ಪ್ರಸ್ತಾಪಿಸುತ್ತೇನೆ ಎಂದು ಶಾಸಕರಾದ ಮಂಜುನಾಥ ಭಂಡಾರಿಯವರು ತಿಳಿಸಿರುತ್ತಾರೆ.

Sponsors

Related Articles

Back to top button