ಸುಳ್ಯ ನಗರದ ಕಸ ಕಲ್ಚರ್ಪೆಗೆ – ಸ್ಥಳೀಯರಿಂದ ಪ್ರತಿಭಟನೆ….
ಸುಳ್ಯ: ಸುಳ್ಯ ನಗರದ ಕಸವನ್ನು ಕಲ್ಚರ್ಪೆಗೆ ತಂದು ಹಾಕುತ್ತಿರುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಕಲ್ಚರ್ಪೆಯಲ್ಲಿ ಅ.14 ರಂದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಡಿಕೇರಿ ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ, ಇಲ್ಲಿ ಕಸ ಹಾಕುವ ಪ್ರಸ್ತಾವ ಬಂದಾಗಲೇ ನಾವು ಹೋರಾಟ ನಡೆಸಿದ್ದೆವು. ನ್ಯಾಯಾಲಯದ ಮೆಟ್ಟಿಲೇರಿ ಪ್ರತಿಭಟಿಸಿದ್ದೆವು. ಆದರೆ ಆಗಿನ ಜಿಲ್ಲಾಧಿಕಾರಿ ಅವರು ಆಧುನಿಕ ತಂತ್ರಜ್ಞಾನ ಬಳಸಿ ತ್ಯಾಜ್ಯ ಮರು ಬಳಕೆಗೆ ವ್ಯವಸ್ಥೆ ಮಾಡುವುದಾಗಿ ನ್ಯಾಯಾಲಯದ ಮುಂದೆ ಹೇಳಿದ ಕಾರಣ ನ್ಯಾಯಾಲಯದಲ್ಲಿ ಅವರಿಗೆ ಜಯ ಸಿಕ್ಕಿತ್ತು. ಆದರೆ ಡಿ.ಸಿ. ಅವರು ಈ ತನಕವೂ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಿಲ್ಲ ಎಂದರು.
ಅಶೋಕ್ ಪೀಚೆ ಮಾತನಾಡಿ, ನಗರದ ಕಸಕ್ಕೆ ದುಗಲಡ್ಕದಲ್ಲಿ ಜಾಗ ಗೊತ್ತು ಮಾಡಿದ ಸಂದರ್ಭ ಸ್ಥಳೀಯ ನಿವಾಸಿಗಳ ಒತ್ತಡಕ್ಕೆ ಮಣಿದ ನ.ಪಂ. ಈಗ ಮತ್ತೆ ಇಲ್ಲಿಗೆ ಕಸ ಹಾಕುತ್ತಿದೆ. ಇದರ ಮಧ್ಯೆ ಅಜ್ಜಾವರದಲ್ಲಿಯೂ ಸ್ಥಳ ಗುರುತಿಸಿದ್ದರೂ ಅಲ್ಲಿಯೂ ವಿರೋಧ ಕಂಡು ಬಂತು. ನ.ಪಂ. ಅಧಿಕಾರಿಗಳಿಗೆ ಆ ಪ್ರದೇಶದ ಜನರು ಮಾತ್ರ ಮನುಷ್ಯರಂತೆ ಕಾಣುತ್ತಾರೆ. ನಮ್ಮ ಬೇಡಿಕೆಯಂತೆ ಇಲ್ಲಿ ಕಸ ಹಾಕಬಾರದು ಎಂದು ಎಚ್ಚರಿಸಿದರು.
ನ.ಪಂ. ಮಾಜಿ ಸದಸ್ಯ ಕೆ. ಗೋಕುಲ್‌ದಾಸ್ ಮಾತನಾಡಿ, ನಾನು ನ.ಪಂ. ಸದಸ್ಯನಾಗಿದ್ದ ಸಂದರ್ಭ ಕಲ್ಚರ್ಪೆಗೆ ಕಸ ಹಾಕಬಾರದೆಂದು ಧ್ವನಿ ಎತ್ತಿದ್ದೆ. ಬದಲಿ ಜಾಗದ ವ್ಯವಸ್ಥೆಯ ಬಗ್ಗೆಯೂ ಸಲಹೆ ನೀಡಿದಾಗ ಅಧಿಕಾರಿಗಳು ಮಾಧ್ಯಮದವರಿಗೆ ತಪ್ಪು ಮಾಹಿತಿ ನೀಡಿದ್ದರಿಂದ ಆ ಊರಿನ ಜನರು ವಿರೋಧ ವ್ಯಕ್ತಪಡಿಸಿದರು. ಒಂದು ವರ್ಷದಿಂದ ಈ ಪ್ರದೇಶಕ್ಕೆ ಕಸ ಪೂರೈಕೆ ಸ್ಥಗಿತವಾಗಿತ್ತು. ಈಗ ಪುನರಾರಂಭವಾಗಿದೆ ಎಂದರು.