ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಟೆಕ್ ಯುವ 23…
ಮಂಗಳೂರು: ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವ “ಟೆಕ್ ಯುವ – 23” ಕಾರ್ಯಕ್ರಮವು ಇಂದು ಬೆಳಿಗ್ಗೆ ಉದ್ಘಾಟನೆಗೊಂಡಿತು.
ಅಮೇರಿಕಾದ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಮತ್ತು ಕಿಲ್ಬಿ ಲ್ಯಾಬ್ ಇದರ ತಾಂತ್ರಿಕ ವಿಭಾಗದ ಸದಸ್ಯರು ಹಾಗೂ ಕರ್ನಾಟಕ ಮೈಕ್ರೋ ಇಲೆಕ್ಟ್ರೋನಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಮತ್ತು ನಿರ್ದೇಶಕರಾದ ಶ್ರೀ ರತ್ನಾಕರ್ ಎಸ್. ಭಟ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳು ಹಾಗೂ ಮಂಗಳೂರಿನ ಎ. ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಸಿಎ ಎ. ರಾಘವೇಂದ್ರ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಸನ್ಮಾನ್ಯ ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರು ಗೌರವ ಅತಿಥಿಗಳಾಗಿ ಆಗಮಿಸಿದ್ದರು.
ಡಾ. ಅನಿಲ್ ಕುಮಾರ್ (ರಿಜಿಸ್ಟ್ರಾರ್), ಡಾ. ಅಜಯ್ ಕೆ. ಜಿ. (ರಿಜಿಸ್ಟ್ರಾರ್ ಡೆವಲಪ್‌ಮೆಂಟ್), ವಿಶ್ವವಿದ್ಯಾಲಯದ ಡಿಜಿಟಲೀಕರಣ ವಿಭಾಗದ ಮುಖ್ಯಸ್ಥರಾದ ಡಾ. ಸುಷ್ಮಾ ಕೇಸರಿ, ಕಾಲೇಜಿನ ಮುಖ್ಯಸ್ಥರಾದ ಡಾ. ಥಾಮಸ್ ಪಿಂಟೋ, ಅಸೋಸಿಯೇಟ್ ಡೀನ್ ಡಾ. ನೇತ್ರಾವತಿ ಪಿ. ಎಸ್., ಟೆಕ್ ಯುವ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್, ಟೆಕ್ ಯುವ-23 ರ ವಿದ್ಯಾರ್ಥಿ ಸಮನ್ವಯಕಾರರಾದ ಶ್ರೀ ರೋಷನ್ ರಾಕೇಶ್ ನಾಯರ್ ಮತ್ತು ಕುಮಾರಿ ವೈಷ್ಣವಿ ಶಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿಗಳಾದ ಶ್ರೀ ರತ್ನಾಕರ್ ಎಸ್. ಭಟ್ ರವರು ಮಾತನಾಡಿ, ಟೆಕ್ ಯುವ ಕಾರ್ಯಕ್ರಮವನ್ನು ಸಂಯೋಜಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಮತ್ತು ಕಾರ್ಯಕ್ರಮವನ್ನು ಆಯೋಜಿಸಿದ ವಿದ್ಯಾರ್ಥಿಗಳ ಉತ್ತಮ ಪ್ರಯತ್ನವನ್ನು ಶ್ಲಾಘಿಸಿದರು. ಇಂತಹ ತಾಂತ್ರಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವ ಮುಲಕ ವಿದ್ಯಾರ್ಥಿಗಳನ್ನು ಮತ್ತಷ್ಟು ಪ್ರೋತ್ಸಾಹಿಸಿ, ಅವರಲ್ಲಿ ಉತ್ತಮ ನಾಯಕತ್ವ ಗುಣವನ್ನು ಹೆಚ್ಚಿಸಲು ಸಾಧ್ಯ. ಆದ್ದರಿಂದ, ಎಲ್ಲಾ ವಿದ್ಯಾರ್ಥಿಗಳು ಈ ತಾಂತ್ರಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ತಾಳ್ಮೆ, ಪರಿಶ್ರಮ ಮತ್ತು ಪ್ರಕ್ರಿಯೆ, ಈ ಮೂರು ಅಂಶಗಳು ಜೀವನದಲ್ಲಿ ಮುಖ್ಯ. ಈ ಮುರು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸನ್ನು ಹೊಂದಲು ಸಾಧ್ಯ. ಸತತ ಪ್ರಯತ್ನ, ಏಕಾಗ್ರತೆ ಮತ್ತು ಹೆಚ್ಚಿನ ಪ್ರಯತ್ನಗಳನ್ನು ಮಾಡುವುದರ ಮೂಲಕ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿ ಶುಭವನ್ನು ಹಾರೈಸಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರು ಮಾತನಾಡಿ, ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಬಹಳ ಮುಖ್ಯ. ಪ್ರತಿಯೊಬ್ಬರೂ ಇಲ್ಲಿ ವಿಜೇತರು. ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಅವಕಾಶಗಳು ಲಭಿಸುತ್ತದೆ, ಆ ಮೂಲಕ ಜ್ಞಾನವನ್ನು ಹೆಚ್ಚಿಸುತ್ತದೆ. ಇಂದಿನ ಪೀಳಿಗೆಯು ತಂತ್ರಜ್ಞಾನ ಆಧಾರಿತವಾಗಿದೆ, ಬದಲಾವಣೆಯು ದಿನದ ಕ್ರಮವಾಗಿದೆ. ತಂತ್ರಜ್ಞಾನವು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಆದ್ದರಿಂದ ಹೆಚ್ಚಿನ ತಂತ್ರಜ್ಞಾನವನ್ನು ಕಲಿತು, ಅದನ್ನು ದೈನಂದಿನ ಜೀವನದಲ್ಲಿ ಅಳವಡಿಸುವುದರ ಮುಲಕ ಯಶಸ್ಸನ್ನು ಸಾಧಿಸುವಂತಾಗಲಿ ಎಂದು ಹೇಳಿದರು ಹಾಗೂ ಸುಮಾರು 50 ಕ್ಕೂ ಅಧಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಶುಭವನ್ನು ಕೋರಿದರು.
ತಮ್ಮ ಅಧ್ಯಕ್ಹೀಯ ಭಾಷಣವನ್ನು ಮಾಡಿದ ಡಾ. ಸಿಎ ಎ. ರಾಘವೇಂದ್ರ ರಾವ್ ರವರು ಮಾತನಾಡಿ, ಸತತ ಪರಿಶ್ರಮದ ಮುಲಕ, ವಿಭಿನ್ನ ಆಯಾಮಗಳಲ್ಲಿ ನವೀನತೆಯನ್ನು ಪಡೆದು, ನಿಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ನಾಲ್ಕು ವರ್ಷಗಳ ಸಮರ್ಪಿತ ಇಂಜಿನಿಯರಿಂಗ್ ಅಧ್ಯಯನವು ವಿದ್ಯಾರ್ಥಿಯನ್ನು ಯಶಸ್ವಿ ಇಂಜಿನಿಯರಿಂಗ್ ವೃತ್ತಿಪರರಾಗಿ ಬದಲಾಯಿಸುತ್ತದೆ. ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದೇವೆ. ನಮ್ಮ ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಸಿದ್ಧರಾಗಿ ಪರಿವರ್ತಿಸುವುದು ನಮ್ಮ ಗುರಿ. ಆ ಮೂಲಕ ನಮ್ಮ ವಿದ್ಯಾರ್ಥಿಗಳು ಸಧೃಡ ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು ಎಂದು ಹೇಳಿ ಕಾರ್ಯಕ್ರಮವನ್ನು ಆಯೋಜಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂಧರ್ಭದಲ್ಲಿ, ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ ಕಾಲೇಜಿನ ನೂತನ ವೆಬ್ ಸೈಟನ್ನು ಅನಾವರಣಗೊಳಿಸಲಾಯಿತು.
ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥರಾದ ಡಾ. ಥಾಮಸ್ ಪಿಂಟೋ ರವರು ಸ್ವಾಗತ ಭಾಷಣವನ್ನು ಮಾಡಿದರು.
ಟೆಕ್ ಯುವ 23 ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್ ರವರು ಮುಖ್ಯ ಅತಿಥಿ ಶ್ರೀ ರತ್ನಾಕರ್ ಎಸ್. ಭಟ್ ರವರನ್ನು ಸಭೆಗೆ ಪರಿಚಯಿಸಿದರು.
ಡಾ. ನೇತ್ರಾವತಿ ಪಿ. ಎಸ್. ರವರು ಟೆಕ್ ಯುವ ಕಾರ್ಯಕ್ರಮದ ಹಿನ್ನಲೆ ಹಾಗೂ ಕಾರ್ಯಕ್ರಮದ ಮಾಹಿತಿಯನ್ನು ಸಭೆಗೆ ನೀಡಿದರು.
ಪ್ರೊ. ಶ್ವೇತಾ ಪೈ ಯವರು ವಂದನಾರ್ಪಣೆ ಸಲ್ಲಿಸಿದರು.
ವಿದ್ಯಾರ್ಥಿನಿ ಕುಮಾರಿ ಶ್ರೀಜಾ ಶೆಟ್ಟಿ ಮತ್ತು ವಿದ್ಯಾರ್ಥಿ ಸ್ಯಾಮ್ ಅವಿನ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ ಆಗಮಿಸಿದ ಸ್ಪರ್ಧಾಳುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುಮಾರು 2,500 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎರಡು ದಿನಗಳ ಕಾಲ ನಡೆಯಲಿರುವ ಟೆಕ್ ಯುವ 23 ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ.
ವರದಿ: ಪ್ರೊ. ಶ್ರೀನಾಥ್ ರಾವ್ ಕೆ