ಯಕ್ಷಾಂಗಣದಿಂದ ಆನಂದ ಆಳ್ವ, ಪೆರುವಡಿ ಹಾಸ್ಯಗಾರರಿಗೆ ಶ್ರದ್ಧಾಂಜಲಿ…

ಮಂಗಳೂರು: ‘ತಮ್ಮ ಶಿಸ್ತುಬದ್ಧ ಜೀವನ ಶೈಲಿಯಿಂದಾಗಿ 2023 ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವ ದಿನದಂದು 106 ವಸಂತಗಳ ತುಂಬು ಬದುಕನ್ನು ಪೂರೈಸಿದ್ದ ಮಿಜಾರುಗುತ್ತು ಆನಂದ ಆಳ್ವರು ಪರಿಪೂರ್ಣ ವ್ಯಕ್ತಿತ್ವಕ್ಕೊಂದು ಶ್ರೇಷ್ಠ ಮಾದರಿ. ಶತಾಯುಷಿಗಳಾಗಿ ಆಗಲೇ ಅಮರತ್ವಕ್ಕೇರಿದ್ದ ಅವರು ಇದೀಗ ಭೌತಿಕವಾಗಿ ನಮ್ಮನ್ನಗಲಿದರು’ ಎಂದು ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ನಿನ್ನೆ ಮೂಡುಬಿದಿರೆಯಲ್ಲಿ ನಿಧನರಾದ ಹಿರಿಯ‌ ಸಾಧಕ – ಸಾಮಾಜಿಕ ನೇತಾರ ಎಂ.ಆನಂದ ಆಳ್ವರಿಗೆ ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಏರ್ಪಡಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿ ನಮನ ಸಲ್ಲಿಸಿದರು. ‘ಕೃಷಿ ಬದುಕಿನ ಉನ್ನತ ನಿದರ್ಶನವೂ ಸೇರಿದಂತೆ ಆಧುನಿಕ ಮೂಡಬಿದ್ರೆಯ ಶಿಲ್ಪಿ ಕನ್ನಡ ನಾಡಿನ ಸಾಂಸ್ಕೃತಿಕ ವಕ್ತಾರ ಡಾ.ಎಂ.ಮೋಹನ ಆಳ್ವರೇ ಸ್ವಯಂ ಆನಂದ ಆಳ್ವರು ಸಮಾಜಕ್ಕೆ ಬಿಟ್ಟು ಹೋದ ದೊಡ್ಡ ಆಸ್ತಿ’ ಎಂದವರು ಹೇಳಿದರು.

ಹಾಸ್ಯರಸದ ಮೇರು ಪ್ರತಿಭೆ ಪೆರ್ವಡಿ:
ಅದೇ ದಿನ ಸಾಯಂಕಾಲ ನಿಧನರಾದ ಯಕ್ಷಗಾನದ ಹಿರಿಯ ಹಾಸ್ಯ ದಿಗ್ಗಜ ಪೆರುವಡಿ ನಾರಾಯಣ ಭಟ್ಟರಿಗೆ ಶ್ರದ್ಧಾಂಜಲಿ ಸಮರ್ಪಿಸಿ ಮಾತನಾಡಿದ ಅವರು ‘ಪಾಪಣ್ಣ ಭಟ್ಟರೆಂದೇ ಜನಪ್ರಿಯರಾದ ಯಕ್ಷಗಾನದ ಶ್ರೇಷ್ಠ ಹಾಸ್ಯಗಾರ, ಗಂಭೀರ ಹಾಸ್ಯದ ಚರಿತ್ರ ನಟ, ಮೇಳ ಸಂಘಟಕ ಪುತ್ತೂರು ನಾರಾಯಣ ಭಟ್ಟರು ನೂರರ ಹೊಸ್ತಿಲಲ್ಲಿರುವಾಗಲೇ ನಮ್ಮನ್ನಗಲಿರುವುದು ಮತ್ತೊಂದು ದೊಡ್ಡ ಆಘಾತ. ಹಳೆಯ ತಲೆಮಾರಿನ ಹಿರಿಯ ಪ್ರತಿನಿಧಿಯಾಗಿದ್ದ ಅವರು ಕಲಾವಂತಿಕೆ ಮತ್ತು ಸಜ್ಜನಿಕೆ ಮೇಳೈಸಿದ ಅಪರೂಪದ ಕಲಾವಿದರು; ಹಾಸ್ಯರಸದ ಮೇರು ಪ್ರತಿಭೆ’ ಎಂದರು
ಯಕ್ಷಾಂಗಣದ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ರವೀಂದ್ರ ರೈ ಕಲ್ಲಿಮಾರು, ಉಮೇಶ್ ಆಚಾರ್ಯ ಗೇರುಕಟ್ಟೆ, ಕರುಣಾಕರ ಶೆಟ್ಟಿ ಬೆಳ್ತಂಗಡಿ, ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ನಿವೇದಿತಾ ಎನ್ ಶೆಟ್ಟಿ ನುಡಿ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ನಿನ್ನೆ ಅಕಾಲಿಕವಾಗಿ ಅಗಲಿ ಹೋದ ಉತ್ಸಾಹೀ ಪತ್ರಕರ್ತ – ಸಂಘಟಕ ಶೇಖರ ಅಜೆಕಾರು ಅವರ ನಿಧನಕ್ಕೂ ತೀವ್ರ ಸಂತಾಪ ವ್ಯಕ್ತಪಡಿಸಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

20231031 180242

Sponsors

Related Articles

Back to top button