ವಿಕಾಸಂ ಸೇವಾ ಫೌಂಡೇಶನ್ – ವಿಶ್ವ ಅಂಗವಿಕಲರ ದಿನಾಚರಣೆ…
ಬಂಟ್ವಾಳ: ವಿಶ್ವ ಅಂಗವಿಕಲರ ದಿನಾಚರಣೆ ಮತ್ತು ದಿವ್ಯಾಂಗರ ಸಮಸ್ಯೆ ಕುರಿತು ಜಾಗೃತಿ ಕಾರ್ಯಕ್ರಮ ಬಿ.ಸಿ.ರೋಡಿನ ಬಿ.ಜೆ.ಕಾಂಪ್ಲೆಕ್ಸ್ ನಲ್ಲಿರುವ ವಿಕಾಸಂ ಸೇವಾ ಫೌಂಡೇಶನ್ ಸಭಾಂಗಣದಲ್ಲಿ ಡಿ.3 ರಂದು ವಿಕಾಸಂ ಸೇವಾ ಫೌಂಡೇಶನ್ ಮತ್ತು ರೋಟರಿ ಕ್ಲಬ್ ಬಂಟ್ವಾಳ ಟೌನ್ ಸಹಕಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಸುರೇಶ್ ಸಾಲ್ಯಾನ್, ವಿಶೇಷ ಚೇತನ ಮತ್ತು ಅಂಗವಿಕಲರಿಗೆ ನೆರವು ನೀಡಲು ರೋಟರಿ ಸಂಸ್ಥೆ ಸಿದ್ಧವಾಗಿದ್ದು, ಸಮಾಜದ ಮುಖ್ಯ ವಾಹಿನಿಗೆ ಸ್ವಾವಲಂಬಿಗಳಾಗಿ ಮೂಡಿಬರಲು ಸಹಕಾರ ನೀಡುತ್ತೇವೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಚೇರ್ಮನ್ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಸಿ.ಎ.ಶಾಂತಾರಾಮ ಶೆಟ್ಟಿ ಮಾತನಾಡಿ, ಹುಟ್ಟಿನಿಂದಲೇ ಬರುವ ಅಂಗವೈಕಲ್ಯದ ಜೊತೆ ಅಪಘಾತದಿಂದ ಉಂಟಾಗುವ ಆಘಾತಗಳ ಕುರಿತು ಪ್ರಸ್ತಾಪಿಸಿ, ಸಮಾಜ ಇವರ ಜೊತೆಗೆ ನಿಲ್ಲಬೇಕಾಗಿದೆ ಎಂದರು.
ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಪದ್ಮನಾಭ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ವಿಕಾಸಂ ಸೇವಾ ಫೌಂಡೇಶನ್ ನಿರ್ದೇಶಕ ಗೋಪಾಲ್ ಜಿ.ಎಸ್ ವಹಿಸಿದ್ದು, ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಈ ಸಂದರ್ಭ ರೆಡ್ ಕ್ರಾಸ್ ಸಂಸ್ಥೆ ಸದಸ್ಯರಾಗಿರುವ ಪ್ರಭಾಕರ ಶರ್ಮ, ರವೀಂದ್ರನಾಥ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ನ ನಿಯೋಜಿತ ಅಧ್ಯಕ್ಷ ಕಿಶೋರ್, ಪೂರ್ವಾಧ್ಯಕ್ಷರಾದ ಶನ್ಫತ್ ಶರೀಫ್, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಜಯರಾಜ್ ಎಸ್.ಬಂಗೇರ, ಪದಾಧಿಕಾರಿಗಳಾದ ನಾರಾಯಣ ಸಿ.ಪೆರ್ನೆ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.
ವಿಶೇಷಚೇತನ ಮಕ್ಕಳ ಗುರುತಿಸುವಿಕೆ ಹಾಗೂ ಬೆಳೆಸುವ ಹಂತದಲ್ಲಿ ಎದುರಿಸಬೇಕಾದ ಸವಾಲುಗಳು, ಅವರಿಗೆ ನೀಡಬೇಕಾದ ಕಾಳಜಿಯ ಕುರಿತು ಪತ್ರಕರ್ತ ಹರೀಶ ಮಾಂಬಾಡಿ ಸ್ವಾನುಭವದ ವಿಚಾರ ಮಂಡಿಸಿದರು. ವಿಕಾಸಂ ನಿರ್ದೇಶಕ ಧರ್ಮಪ್ರಸಾದ್ ರೈ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಮತ್ತೋರ್ವ ನಿರ್ದೇಶಕ ಗಣೇಶ್ ಭಟ್ ವಾರಣಾಸಿ ಕಾರ್ಯಕ್ರಮದ ಉದ್ದೇಶ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗ ವಿದ್ಯಾರ್ಥಿಗಳಿಗೆ ತರಬೇತಿ ನಡೆಯಿತು.