ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಕುಟುಂಬ ಪ್ರಬೋಧನಾ ಕಾರ್ಯಕ್ರಮ…
ಪುತ್ತೂರು: ಇಂದ್ರಿಯಗಳು ಕೇಳಿದ್ದನ್ನು ಕೇಳಿದ ಹಾಗೆ ಕೊಟ್ಟರೆ ಅವು ನಮ್ಮನ್ನು ದಾರಿ ತಪ್ಪಿಸುತ್ತವೆ. ಮನಸ್ಸಿನ ಮಟ್ಟಕ್ಕೆ ಬುದ್ದಿಯನ್ನು ತರಬಾರದು ಬದಲಿಗೆ ಮನಸ್ಸನ್ನು ಬುದ್ದಿಯ ಮಟ್ಟಕ್ಕೆ ಏರಿಸಬೇಕು ಎಂದು ವಿಶ್ವ ಹಿಂದೂ ಪರಿಷದ್‍ನ ಜಿಲ್ಲಾ ಸತ್ಸಂಗ ಪ್ರಮುಖ ಹಾಗೂ ಸಂಸ್ಕಾರ ಭಾರತಿಯ ಜಿಲ್ಲಾ ಸಂಯೋಜಕ ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಗ್ರಾಮ ವಿಕಾಸ ಯೋಜನಾ ಘಟಕದ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ನಡೆದ ಕುಟುಂಬ ಪ್ರಬೋಧನಾ ಕಾರ್ಯಕ್ರಮದಲ್ಲಿ ಷೋಡಶ ಸಂಸ್ಕಾರಗಳು ಎನ್ನುವ ವಿಷಯದ ಬಗ್ಗೆ ಮಾತನಾಡಿದರು.
ಇಂದ್ರಿಯಗಳನ್ನು ಹಿಡಿದಿಟ್ಟುಕೊಳ್ಳುವುದು ಕ್ಲಿಷ್ಟಕರ ಕೆಲಸ ಆದರೆ ಸಾಧನೆಯ ಹಾದಿಯಲ್ಲಿ ಇಂದ್ರಿಯ ನಿಗ್ರಹ ಎನ್ನುವ ಇಚ್ಚಾ ಶಕ್ತಿಯನ್ನು ಬೆಳೆಸಿಕೊಳ್ಳಲೇಬೇಕು. ವಿವಿಧ ಸಂಸ್ಕಾರಗಳ ಚೌಕಟ್ಟಿನಲ್ಲಿ ಜೀವಿತವನ್ನು ಕಟ್ಟಿಕೊಂಡಾಗ ನಾವು ಔನ್ನತ್ಯವನ್ನು ಪ್ರಾಪ್ತಿಸಿಕೊಳ್ಳಬಹುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್ ಮಾತನಾಡಿ ಆಧುನಿಕತೆಯ ನೆಪದಲ್ಲಿ ನಾವು ನಮ್ಮ ಸಂಸ್ಕಾರಗಳನ್ನು ಮರೆತು ಸ್ವಚ್ಚಂದವಾಗಿ ಜೀವಿಸುವುದಕ್ಕೆ ಪ್ರಾರಂಭಿಸಿದೆವು, ಅದರ ಫಲ ಈಗ ಗೋಚರಕ್ಕೆ ಬರುತ್ತಿದೆ. ಸನಾತನ ಸಂಸ್ಕೃತಿಯ ಜತೆಯಲ್ಲಿ ರಾಷ್ಟ್ರಪ್ರೇಮವನ್ನೂ ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಗ್ರಾಮ ವಿಕಾಸ ಯೋಜನಾ ಘಟಕದ ಸಂಯೋಜಕಿ ಡಾ.ಸೌಮ್ಯ.ಎನ್.ಜೆ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕಿ ಪ್ರೊ.ಪ್ರಭಾ.ಜಿ.ಎಸ್ ವಂದಿಸಿದರು. ಅಪೇಕ್ಷಾ ಕಾರ್ಯಕ್ರಮ ನಿರ್ವಹಿಸಿದರು.