ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ರಾಮಾಯಣದಲ್ಲಿ ತಾಂತ್ರಿಕತೆ ಸರಣಿ ವಿಚಾರ ಸಂಕಿರಣ…
ಪುತ್ತೂರು: ರಾಮಾಯಣ ಮಹಾಕಾವ್ಯ ಮಣ್ಣಿನ ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತದೆ. ಅಲ್ಲದೆ ಅಲ್ಲಿ ಬರುವಂತಹ ಪ್ರತಿಯೊಂದು ಪಾತ್ರಗಳೂ ಅನೇಕ ರೀತಿಯ ತಂತ್ರಜ್ಞಾನಗಳನ್ನು ಪರಿಚಯಿಸುತ್ತವೆ ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆದ ಶ್ರೀರಾಮ ಸಪ್ತಾಹ ಕಾರ್ಯಕ್ರಮದಲ್ಲಿ ರಾಮಾಯಣದಲ್ಲಿ ತಾಂತ್ರಿಕತೆ ಎನ್ನುವ ವಿಷಯದ ಬಗ್ಗೆ ಮಾತನಾಡಿದರು.
ಹನುಮಂತನ ಇರುವಿಕೆಯಿಂದ ನಾವು ನ್ಯಾನೋ ತಂತ್ರಜ್ಞಾನವನ್ನು ನೋಡಿದ್ದೇವೆ. 7000 ವರ್ಷಗಳ ಹಿಂದೆಯೇ ಹೊಲೋಗ್ರಾಂ ತಂತ್ರಜ್ಞಾನ ಅಸ್ತಿತ್ವದಲ್ಲಿ ಇತ್ತು, ರಾಮಾಯಣದಲ್ಲಿ ಬರುವ ಸಂಜೀವಿನಿ ಹಿಂದೂ ಧರ್ಮದ ಪ್ರಕಾರ ಒಂದು ಮಾಂತ್ರಿಕ ಗಿಡಮೂಲಿಕೆ. ನರಮಂಡಲದ ಗಂಭೀರ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿ ಈ ಔಷಧಿಗಿದೆ ಎಂದು ಅವರು ಹೇಳಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ ಮಾತನಾಡಿ ರಾಮಾಯಣದಲ್ಲಿ ರಾಮಸೇತುವಿನ ಉಲ್ಲೇಖಗಳು ನಮಗೆ ಕಾಣಸಿಗುತ್ತವೆ. 2004 ರಿಂದ ಈಚೆಗೆ ರಾಮಸೇತುವುನ ಬಗ್ಗೆ ಅನೇಕ ಚರ್ಚೆಗಳನ್ನು ನಾವು ಕಾಣಬಹುದು. ಇದು ಭಾರತ ಹಾಗೂ ಶ್ರೀಲಂಕಾದ ನಡುವೆ ಸುಮಾರು 36 ಕಿಮೀ ಉದ್ದದ ಬೆಸುಗೆಯಾಗಿದ್ದು, ನಾಸಾದವರು ನಡೆಸಿದ ಸಂಶೋಧನೆಯಲ್ಲಿ ರಾಮಸೇತುವಿನ ಇರುವಿಕೆ ಗೋಚರವಾಗುತ್ತದೆ. ಸಮುದ್ರ ಶಾಸ್ತ್ರದ ಅಧ್ಯಯನಗಳ ಪ್ರಕಾರ ಸೇತುವೆ 7000 ವರ್ಷಗಳಷ್ಟು ಹಳೆಯದು ಎನ್ನುವ ಮಾಹಿತಿಗಳೂ ಲಭ್ಯವಾಗುತ್ತವೆ. ರಾಮಾಯಣ ಮಹಾಕಾವ್ಯವಾದರೂ ಅದರಲ್ಲಿ ಅಡಕವಾಗಿರುವ ತಾಂತ್ರಿಕತೆ ಅಗಾಧವಾದದ್ದು ಮತ್ತು ಅಧ್ಯಯನ ಯೋಗ್ಯವಾದದ್ದು ಎಂದು ಅವರು ನುಡಿದರು.
ಭಾರತಮಾತೆ ಹಾಗೂ ಸ್ವಾಮೀ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅತಿಥಿಗಳು ವೇದಿಕೆಗೆ ಆಗಮಿಸಿದರು. ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ಡಾ.ಯಶೋಧಾ ರಾಮಚಂದ್ರ, ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸಂತೋಶ್ ಕುತ್ತಮೊಟ್ಟೆ, ಕಾರ್ಯಕ್ರಮ ಸಂಯೋಜಕರಾದ ಪ್ರೊ.ನವೀನ್.ಎಸ್.ಪಿ, ಪ್ರೊ.ಪ್ರಮೋದ್ ಕುಮಾರ್ ಸಮಾರಂಭದಲ್ಲಿ ಹಾಜರಿದ್ದರು.
ಹಿರಿಯ ಪ್ರಯೋಗಾಲಯ ಬೋಧಕ ಹರಿಪ್ರಸಾದ್.ಡಿ ಕಾರ್ಯಕ್ರಮ ನಿರ್ವಹಿಸಿದರು.